Publish Date: Tue, 29 Mar 2022 (16:22 IST)
Updated Date: Tue, 29 Mar 2022 (16:26 IST)
ರಸ್ತೆ ಬದಿಯಲ್ಲಿ ಮಲಗಿದ್ದ ಏಳು ವರ್ಷದ ಬಾಲಕಿ ಮೇಲೆ ಬೊಲೆರೋ ವಾಹನ ಹರಿದು ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಮುಂಜಾನೆ ನಾಲ್ಕು ಗಂಟೆಗೆ ಈ ದುರ್ಘಟನೆ ನಡೆದಿದ್ದು, ತಮಿಳುನಾಡು ಮೂಲದ ಶಿವನ್ಯ ಮೃತ ದುರ್ದೈವಿಯಾಗಿದ್ದಾಳೆ. ಮೃತ ಮಗು, ಆಕೆಯ ತಾಯಿ ಇಬ್ಬರೂ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ಹುಸ್ಕೂರು ಜಾತ್ರೆಗೆ ಬಂದಿದ್ದರು. ಬಳಿಕ ಊರಿಗೆ ವಾಪಸ್ ಹೋಗಲು ಬಸ್ ಗಾಗಿ ಸಿಟಿ ಮಾರ್ಕೆಟ್ ಗೆ ಬಂದಿದ್ದರು. ನಿನ್ನೆ ರಾತ್ರಿ ಬಸ್ ಸಿಗದೇ ತೆಂಗಿನ ಕಾಯಿ ಮಂಡಿ ಬಳಿಯೇ ಮಕ್ಕಳ ಸಮೇತ ಮಹಿಳೆಯರು ಮಲಗಿದ್ದರು. ಈ ವೇಳೆ ವಾಹನದಲ್ಲಿ ಹೂ ಹಾಕಿಕೊಂಡು ಬಂದಿದ್ದ ಚಾಲಕ ಅನ್ ಲೋಡ್ ಮಾಡಿ ಹೊರಡಲು ಮುಂದಾಗಿದ್ದು, ರಸ್ತೆ ಬದಿಯಲ್ಲಿ ಮಲಗಿದ್ದವರನ್ನು ಗಮನಿಸದೆ ರಿವರ್ಸ್ ತೆಗೆಯುವಾಗ ಬಾಲಕಿ ಮೇಲೆ ಹತ್ತಿಸಿದ್ದಾನೆ.