Publish Date: Mon, 13 Apr 2026 (18:43 IST)
Updated Date: Mon, 13 Apr 2026 (19:34 IST)
ದಾವಣಗೆರೆ: ತಮ್ಮನ್ನು ಹರಿಹರ ಪಂಚಮಸಾಲಿ ಪೀಠದಿಂದ ಪದಚ್ಯುತಿಗೊಳಿಸಿದ ಬೆನ್ನಲ್ಲೇ ಟ್ರಸ್ಟಿಗಳ ವಿರುದ್ಧ ವಚನಾನಂದ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕದಲ್ಲಿ ಪಂಚಮಸಾಲಿ ಸಮಾಜ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ. ಅದರಲ್ಲೂ ಪಂಚಮಸಾಲಿ ನಾಯಕರು ತುಂಬಾ ಪ್ರಭಾವಿಗಳಾಗುತ್ತಿದ್ದಾರೆ. ಹೀಗಾಗಿ, ಬೇಕಂತಲೇ ನಮ್ಮ ಪಂಚಮಸಾಲಿ ನಾಯಕರೊಂದಿಗೆ ನಮ್ಮ ಸಮಾಜದ ಸ್ವಾಮೀಜಿಗಳನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂಬಂಧ ಮಾಧ್ಯಮದವರ ಜತೆ ಮಾತನಾಡಿದ ಅವರು, ನಾವು 2018ರಲ್ಲಿ ಪಂಚಮಸಾಲಿ ಪೀಠಕ್ಕೆ ಬಂದ ಮೇಲೆ ನಮ್ಮ ಕನಸು ಹರಿಹರ ತಾಲ್ಲೂಕು ದಾವಣಗೆರೆಯ ಪ್ರತಿ ಮನೆಮನೆಗೂ ಹೋಗಬೇಕೆಂದು ಬಯಸಿದ್ದೆವು. ಆದರೆ, ನಾವು ಪೀಠಕ್ಕೆ ಬಂದಾಗಿನಿಂದ ನಮ್ಮನ್ನು ವ್ಯವಸ್ಥಿತವಾಗಿ ಹರಿಹರ ತಾಲೂಕು ಸೇರಿದಂತೆ ಇಡೀ ದಾವಣಗೆರೆ ಜಿಲ್ಲೆಯ ಯಾವುದೇ ಭಕ್ತರ ಮನೆಗೆ ಹೋಗದಂತೆ ತಡೆದರು.
ಆದರೆ, ನಾವು ಇತ್ತೀಚಿನ ದಿನಗಳಲ್ಲಿ ಭಕ್ತರ ಮನೆಗಳಿಗೆ ಹೋಗುತ್ತಿದ್ದೇವೆ. ನಾವು ಪ್ರವಾಸಕ್ಕೆ ಹೋದಾಗಲೆಲ್ಲ ಯಾರೇ ಬಡವರು ಕಂಡರೂ ಅಲ್ಲೇ ದುಡ್ಡು ಕೊಟ್ಟು ಬರುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ನಾನು ಹೇಳುವುದೇನೆಂದರೆ, ಭಕ್ತನೇ ಈ ಭೂಮಿಯ ಮೇಲಿನ ಭಗವಂತ ಮತ್ತು ಪಂಚಮಸಾಲಿ ಸಮಾಜವೇ ನನ್ನ ಶ್ವಾಸ. ಇಂದಿಗೂ ನಾನು ಒಂದೇ ಒಂದು ರೂಪಾಯಿಗಾಗಿ ಯಾರ ಬಳಿಯೂ ಕೈ ಒಡ್ಡಿಲ್ಲ. ನಮ್ಮದೇನಿದ್ದರೂ ಕೊಡುವಂತಹ ಕೈ. ಆದರೆ, ನನಗೆ ಭಕ್ತರು ಪ್ರಸಾದವನ್ನು ಕೊಟ್ಟಿದ್ದಾರೆ. ರೊಟ್ಟಿ ಮಾಡಿ ಕೊಟ್ಟಿದ್ದಾರೆ ಮತ್ತು ಅನ್ನ ಮಾಡಿ ಕೊಟ್ಟಿದ್ದಾರೆ. ಅವರ ಋಣದಲ್ಲಿ ನಾನಿದ್ದೇನೆ ಹೊರತು ಉಳಿದ ಯಾರೊಬ್ಬರ ಋಣದಲ್ಲೂ ನಾನಿಲ್ಲ ಎಂದು ಹೇಳಿದರು.