Publish Date: Tue, 17 Jun 2025 (15:48 IST)
Updated Date: Tue, 17 Jun 2025 (15:53 IST)
ಬೆಂಗಳೂರು: ಆರ್.ಸಿ.ಬಿ. ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದ ದುರಂತ, 11 ಜನರ ಸಾವಿನ ಹೊಣೆ ಹೊತ್ತು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಮತ್ತು ಈ ಕುರಿತು ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಅವರು ಒತ್ತಾಯಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಲ್ತುಳಿತದ ಮೂಲಕ 11 ಜನ ಅಮಾಯಕ ಯುವಜನರ ಸಾವಿನ ಚರ್ಚೆಯನ್ನು ಜಾತಿ ಗಣತಿ ಮಾಡಿಸುವುದಾಗಿ ಪ್ರಕಟಿಸಿ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ಷೇಪಿಸಿದರು. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಇವತ್ತು ಪ್ರತಿಭಟನೆ ಮುಂದುವರೆಸಿದ್ದೇವೆ ಎಂದು ವಿವರಿಸಿದರು.
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪೈಪೋಟಿಯ ರೂಪದಲ್ಲಿ ಸಂಭ್ರಮದಲ್ಲಿ ನಾ ಮುಂದು ನಾ ಮುಂದು ಎಂಬಂತೆ ಪಾಲ್ಗೊಂಡಿದ್ದರು. ವಿಧಾನಸೌಧದಲ್ಲಿ ಒಬ್ಬರು, ವಿಮಾನನಿಲ್ದಾಣದಲ್ಲಿ ಒಬ್ಬರು, ಸ್ಟೇಡಿಯಂನಲ್ಲಿ ಒಬ್ಬರು ಎಂಬಂತೆ ಪೈಪೋಟಿ ನಡೆದಿತ್ತು ಎಂದು ತಿಳಿಸಿದರು. ಈಗ ನನಗೇನೂ ಸಂಬಂಧ ಇಲ್ಲ ಎಂಬ ವಾತಾವರಣ ಸೃಷ್ಟಿಸಿ ಇನ್ನೊಬ್ಬರ ಹೆಗಲ ಮೇಲೆ ಹಾಕುವ ವಾತಾವರಣ ಸೃಷ್ಟಿಸಿದ್ದಾರೆ ಎಂದು ಟೀಕಿಸಿದರು.