ಯುಪಿಎ 2ನೇ ಅವಧಿಯ ಭ್ರಷ್ಟಾಚಾರ ಬಿಚ್ಚಿಟ್ಟ ಮಾಜಿ ಸಿಎಂ!

ಭಾನುವಾರ, 10 ಫೆಬ್ರವರಿ 2019 (17:32 IST)
ಸಕ್ಕರೆ ನಾಡು ಮಂಡ್ಯದಲ್ಲಿ ಬಿಜೆಪಿ ಪಕ್ಷವನ್ನ ಬಲಗೊಳಿಸಲು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕೀಯ ಧುರೀಣ ಎಸ್.ಎಂ.ಕೃಷ್ಣ ಅಖಾಡಕ್ಕೆ ಇಳಿದಿದ್ದಾರೆ. ಇದೇ ಸಂದರ್ಭದಲ್ಲಿ ಎರಡನೇ ಅವಧಿಯಲ್ಲಿ ಯುಪಿಎ ಸರ್ಕಾರದ ಭ್ರಷ್ಟಾಚಾರದ ಆರೋಪ ಹಾಗೂ ಸರ್ಕಾರದ ಮೇಲೆ ರಾಹುಲ್ ಗಾಂಧಿ ಹಸ್ತಕ್ಷೇಪದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಲೋಕಸಭಾ ಚುನಾವಣೆಯ ದೃಷ್ಟಿಯಿಂದ ತಮ್ಮ ತವರು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನ ಸಂಘಟಿಸಲು ಮಂಡ್ಯ ನಗರದ ಬಿಜಿಎಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ,  ಯುಪಿಎ ಎರಡನೇ ಅವಧಿಯ ಸರ್ಕಾರದ ಭ್ರಷ್ಟಾಚಾರದ ಆರೋಪದ ಬಗ್ಗೆ ಜೊತೆಗೆ ರಾಹುಲ್ ಹಸ್ತಕ್ಷೇಪದ ಬಗ್ಗೆ ಮಾತನಾಡಿದರು. ಯುಪಿಎ ಎರಡನೇ ಅವಧಿಯಲ್ಲಿ ನಾನು ವಿದೇಶಾಂಗ ಸಚಿವನಾಗಿ ಕಾರ್ಯನಿರ್ವಹಿಸ್ತಿದ್ದೆ.

ಆ ಸಂದರ್ಭದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಗೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಮೇಲೆ ಹಿಡಿತವೇ ಇರಲಿಲ್ಲ. ಆದ್ದರಿಂದಲೇ ದೊಡ್ಡ ದೊಡ್ಡ ಹಗರಣಗಳು ನಡೆದವು. ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗದ ರಾಹುಲ್ ಗಾಂಧಿ ಸರ್ಕಾರದ ಮೇಲೆ ಹಿಡಿತ ಸಾಧಿಸ್ತಿದ್ರು. ಜೊತೆಗೆ 80 ವರ್ಷ ಆದವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂಬ ಫರ್ಮಾನು ಹೊರಡಿಸಿದ್ರು. ಆದ್ದರಿಂದಲೇ ಬೇಸರದಿಂದ ನಾನು ರಾಜೀನಾಮೆ ಕೊಟ್ಟು ಬಂದೆ. ಜೊತೆಗೆ ಸರ್ಕಾರದಲ್ಲಿ ಪಾರ್ಲಿಮೆಂಟರಿ ಜವಾಬ್ದಾರಿ ಇಲ್ಲದ ರಾಹುಲ್ ಹಸ್ತಕ್ಷೇಪ ಬೇಸರ ತರಿಸಿತ್ತು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೋಕಸಭೆ ಎಲೆಕ್ಷನ್: ರೌಡಿಗಳು ಮಾಡಿದ್ದೇನು?