Select Your Language

Notifications

webdunia
webdunia
webdunia
webdunia

ಎರಡು ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡಿದ್ದರೆ ಒಮಿಕ್ರಾನ್ ತೀವ್ರತೆ ಕಡಿಮೆ

ಎರಡು ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡಿದ್ದರೆ ಒಮಿಕ್ರಾನ್ ತೀವ್ರತೆ ಕಡಿಮೆ
bangalore , ಸೋಮವಾರ, 6 ಡಿಸೆಂಬರ್ 2021 (20:20 IST)
ರಾಜ್ಯದಲ್ಲಿ ಪತ್ತೆಯಾದ ಒಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಯಾವುದೇ ಆರೋಗ್ಯ ಸಮಸ್ಯೆ, ಅಥವಾ ರೋಗ ಲಕ್ಷಣ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಎರಡು ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಸೋಂಕಿತರ ಸಂಪರ್ಕದಲ್ಲಿದ್ದವರ ಜಿನೊಮಿಕ್ಸ್ ಸೀಕ್ವೆನ್ಸ್ ವರದಿ ಇನ್ನೂ ಬಂದಿಲ್ಲ. ಬೇರೆ ರಾಜ್ಯಗಳಲ್ಲಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಇಲ್ಲಿ ತನಕ ಎರಡು ಕೇಸ್ ಮಾತ್ರ ಇದೆ. ಅವರ ಸಂಪರ್ಕಿತರಿಗೆ ಯಾವುದೇ ಸಮಸ್ಯೆಗಳು, ಲಕ್ಷಣಗಳು ಕಂಡುಬಂದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆ ನಿರ್ದೇಶಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಒಮಿಕ್ರಾನ್ ಸೋಂಕಿತರ ಸಂಪರ್ಕ ಹೊಂದಿದ್ದವರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು.
 
ಎರಡು ಡೋಸ್ ಲಸಿಕೆ ತೆಗೆದುಕೊಂಡವರಲ್ಲಿ ಒಮಿಕ್ರಾನ್ ಸೋಂಕು ತೀವ್ರತೆ ಇರುವುದಿಲ್ಲ. ಇದಕ್ಕೆ ಸೋಂಕಿತರ ಸಂಪರ್ಕದಲ್ಲಿರುವ ಲಕ್ಷಣಗಳೇ ಉದಾಹರಣೆಯಾಗಿದೆ. ಒಂದು ಡೋಸ್ ನಿಂದ ಸಂಪೂರ್ಣ ರೋಗ ನಿರೋಧಕ ಶಕ್ತಿ ಬರುವುದಿಲ್ಲ. ಎರಡೂ ಡೋಸ್ ತೆಗೆದುಕೊಂಡಾಗ ಮಾತ್ರ ಸಂಪೂರ್ಣ ರೋಗ ನಿರೋಧಕ ಶಕ್ತಿ ಬರುತ್ತದೆ. ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು. 
 
ಒಮಿಕ್ರಾನ್  ವಿಚಾರದಲ್ಲಿ ದೊಡ್ಡ ವ್ಯಾಖ್ಯಾನ ಮತ್ತು ಆತಂಕ ಪಡುವಂತಹದ್ದು ಏನೂ ಇಲ್ಲ. ಇದಕ್ಕಿಂತ  ಹೆಚ್ಚು ಆತಂಕಕಾರಿಯಾಗಿದ್ದ  ಡೆಲ್ಟಾ ರೂಪಾಂತರಿಯನ್ನೇ ನಾವು ಎದುರಿಸಿದ್ದೇವೆ.  ಡೆಲ್ಟಾಕ್ಕೆ ಹೋಲಿಕೆ ಮಾಡಿದರೆ, ಓಮಿಕ್ರಾನ್ ಹರಡುವಿಕೆಯಲ್ಲಿ ಮಾತ್ರ ಆತಂಕ ಸೃಷ್ಟಿಸಿದೆ. ಇದರ ತೀವ್ರತೆ ವಿಶ್ವದಲ್ಲಿ ಎಲ್ಲೂ ನೋಡಿಲ್ಲ. ಬೋಟ್ಸ್ ವಾನಾ, ಸೌತ್ ಅಫ್ರಿಕಾ ಸೇರಿದಂತೆ ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ತೀವ್ರತೆ ಕಾಣುತ್ತಿಲ್ಲ. ಈ ವೈರಸ್ ಲಕ್ಷಣಗಳು ಮೃದುವಾಗಿವೆ. ಹೀಗಾಗಿ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಇದು ಬಹಳ ಬೇಗ ಹರಡುವುದರಿಂದ ಮುನ್ನಚ್ಚರಿಕೆ ಅವಶ್ಯಕವಾಗಿದೆ. ಇದು ಹರಡಬಾರದು ಅಂದರೆ ಲಸಿಕಾ ಕಾರ್ಯಕ್ರಮ ವೇಗವಾಗಿ ನಡೆಯಬೇಕು ಎಂದರು.
 
ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ಪಡೆದವರ ಪ್ರಮಾಣ 93% ಕ್ಕೂ ಹೆಚ್ಚಾಗಿದೆ. 2ನೇ ಡೋಸ್ ಪಡೆದವರ ಪ್ರಮಾಣ 64% ಇದೆ. ಲಸಿಕೆ ನೀಡಿದ ವಿಚಾರದಲ್ಲಿ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ. ಡಿಸೆಂಬರ್ ಅಂತ್ಯದ ಒಳಗೆ ಲಸಿಕಾ ಕಾರ್ಯಕ್ರಮ ಮುಗಿಸುವ ಉದ್ದೇಶವಿದೆ. ಅದಕ್ಕಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನೂ ಕೂಡ ಸುಮಾರು 70 ಲಕ್ಷ ಲಸಿಕೆ ದಾಸ್ತಾನು ಇದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದರು.
 
ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಳ್ಳಲಿದೆ. ಕೇಂದ್ರ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಅಂತ ಅಧ್ಯಯನ ಮಾಡುತ್ತಿದೆ. ಬೇರೆ ಬೇರೆ ದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಅಧ್ಯಯನ ಮಾಡುತ್ತಿದೆ. ಸಮಗ್ರ ವರದಿ ಬಂದ ಮೇಲೆ. ಏನು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ನಿರ್ಧರಿಸಲಿದೆ ಎಂದರು.
 
ಯಾವುದೇ ಸಾಂಕ್ರಾಮಿಕ ರೋಗದ ಇತಿಹಾಸ ನೋಡಿದಾಗ 2ನೇ ಅಲೆಯೇ ದೊಡ್ಡ ಪ್ರಮಾಣದ್ದಾಗಿದೆ. 3ನೇ ಅಲೆ ಕಡಿಮೆ ಪ್ರಭಾವ ಬೀರಿದೆ. ಇದಕ್ಕೆ ಐತಿಹಾಸಿಕ ಸಾಕ್ಷಿ ಕೂಡ ಇದೆ. ಹಿಂದೆ ಬಂದಿರುವ ಸಾಂಕ್ರಾಮಿಕ ರೋಗಗಳನ್ನು ನೋಡಿದಾಗ ಮೊದಲ ಅಲೆಗಿಂತ ಎರಡನೇ ಅಲೆ  ತೀವ್ರವಾಗಿತ್ತು. 3 ಮತ್ತು  4ನೇ ಅಲೆ ಬಂದರೂ ಅದರ ತೀವ್ರತೆ ಕಡಿಮೆ ಇತ್ತು ಎಂದು ಹೇಳಿದರು.
 
ಮಕ್ಕಳ ಮೇಲೆ ಡೆಲ್ಟಾ ಪರಿಣಾಮ ಬೀರಿಲ್ಲ. ಡೆಲ್ಟಾಗೆ ಹೋಲಿಕೆ ಮಾಡಿದರೆ ಇದರ ತೀವ್ರತೆ ಕಡಿಮೆ. ಇದು ಮಕ್ಕಳಿಗೆ ಬಂದರೂ ಕೂಡ ಯಾವುದೇ ರೀತಿಯ ಪರಿಣಾಮ ಬೀರಲ್ಲ ಎಂದು ವಿಜ್ಞಾನಿಗಳು ಮತ್ತು ತಜ್ಞರು ಹೇಳಿದ್ದಾರೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಸಹಿತ 6 ದೇಶಗಳ ವಿಮಾನ ಸಂಚಾರ ನಿಷೇಧ ರದ್ದು: ಸೌದಿ ಅರೇಬಿಯಾ ಘೋಷಣೆ