Publish Date: Fri, 29 Sep 2017 (20:16 IST)
Updated Date: Fri, 29 Sep 2017 (20:20 IST)
ಕಲಬುರ್ಗಿ: ಜಿಲ್ಲೆಯಾದ್ಯಂತ ಕಳೆದ ಮಧ್ಯಾಹ್ನದಿಂದ ನಿರಂತರವಾಗಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ಚಿತ್ತಾಪುರ ತಾಲೂಕಿನ ತೊನಸನಳ್ಳಿ(ಟಿ) ಗ್ರಾಮದಲ್ಲಿ ಸಿಡಿಲು ಬಡಿತಕ್ಕೆ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಗ್ರಾಮದ ಬಸಮ್ಮ ಸಂಗಾವಿ(45) ಹಾಗೂ ಅಂಬಿಕಾ ಸರಡಗಿ(43) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದು, ಈ ಪೈಕಿ ಆಂಜನಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಸುಮಾರು ಏಳರಿಂದ ಎಂಟು ಜನರಿದ್ದ ತಂಡ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆ ಸುರಿದಿದೆ. ಮಳೆಯಿಂದ ರಕ್ಷಿಣೆಗಾಗಿ ಎಲ್ಲರೂ ಎತ್ತಿನ ಬಂಡಿಯೊಂದರ ಕೆಳಗೆ ಕುಳಿತಿರುವಾಗ ಸಿಡಿಲು ಬಡಿದು ಅವಘಡ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಮಾಡಬೂಳ ಠಾಣೆ ಪೊಲೀಸರು ಭೇಟಿ ನೀಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.