ಬೆಂಗಳೂರು: ಕಸದ ತೊಟ್ಟಿಯಲ್ಲಿ ಏಳು ತಿಂಗಳ ಮೃತ ನವಜಾತ ಶಿಶುವಿನ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಶಿಶುವಿನ ಹೆತ್ತವರನ್ನು ಬೆನ್ನತ್ತಿದ್ದ ಯಲಹಂಕ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಅಪ್ರಾಪ್ತೆ ಜತೆ ಲೈಂಗಿಕ ಕ್ರಿಯೆ ನಡೆಸಿ ಬಳಿಕ ಪೋಷಕರಿಗೆ ಹೆದರಿ ಗರ್ಭಪಾತಕ್ಕೆ ಕಾರಣನಾದ ಆರೋಪದ ಮೇರೆಗೆ ಆಟೋ ಚಾಲಕನೊಬ್ಬ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.
ಯಲಹಂಕ ಸಮೀಪದ ನಿವಾಸಿ ಭರತ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಕೋಗಿಲು ಕ್ರಾಸ್ ಹತ್ತಿರದ ಕಸದ ತೊಟ್ಟಿಯಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಗಿಳಿದ ಯಲಹಂಕ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ 17 ವರ್ಷದ ಬಾಲಕಿ ಜತೆ ಆಟೋ ಚಾಲಕನ ಪ್ರೇಮ ಪ್ರಕರಣವನ್ನು ಬೇಧಿಸಿದ್ದಾರೆ.
ಬಾಲಕಿ ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಳು. 2 ವರ್ಷಗಳ ಹಿಂದೆ ಆಕೆಗೆ 21 ವರ್ಷ ವಯಸ್ಸಿನ ಆಟೋ ಚಾಲಕ ಭರತ್ ಜತೆ ಪ್ರೇಮವಾಗಿದೆ. ಈ ಪ್ರೇಮದ ನೆಪದಲ್ಲಿ ಬಾಲಕಿಯನ್ನು ಲೈಂಗಿಕವಾಗಿ ಆತ ಬಳಸಿಕೊಂಡಿದ್ದಾನೆ. ಇದರ ಪರಿಣಾಮ ಬಾಲಕಿ ಗರ್ಭಧರಿಸಿದ್ದಾಳೆ. ಆದರೆ ತನ್ನ ಕುಟುಂಬದವರಿಗೆ ಗೊತ್ತಾಗದಂತೆ ಗರ್ಭವತಿಯಾಗಿದ್ದನ್ನು ಆಕೆ ರಹಸ್ಯವಾಗಿಟ್ಟಿದ್ದಳು. ಕೊನೆಗೆ ತನ್ನ ಸ್ನೇಹಿತೆಯರಿಗೆ ಬಾಲಕಿ ತಿಳಿಸಿದ್ದಾಳೆ.
ಗರ್ಭಪಾತದ ಬಗ್ಗೆ ಗೆಳತಿಯರು ಹಾಗೂ ಪ್ರಿಯಕರನ ಜತೆ ಅವಳು ಚರ್ಚಿಸಿ ನಿರ್ಧಾರಿಸಿದ್ದಾಳೆ. ತರುವಾಯ ಔಷಧ ಮಾರಾಟ ಮಳಿಗೆಯಿಂದ ಗರ್ಭಪಾತದ ಮಾತ್ರೆಗಳನ್ನು ತಂದು ಆಕೆಗೆ ಅವಳ ಸ್ನೇಹಿತೆಯರು ತಂದು ಕೊಟ್ಟಿದ್ದಾರೆ. ಹತ್ತು ದಿನಗಳ ಹಿಂದೆ ತನ್ನ ಹೆತ್ತವರು ಮನೆಯಲ್ಲಿಲ್ಲದ ಹೊತ್ತಿನಲ್ಲಿ ಮಾತ್ರೆ ಸೇವಿಸಿದ ಆಕೆ, ತನ್ನ ಗೆಳೆತಿಯರ ಸಹಕಾರದಲ್ಲಿ ಗರ್ಭಪಾತ ಮಾಡಿಕೊಂಡಿದ್ದಾಳೆ.
ಮಗುವಿನ ಶವವನ್ನು ಪೊಟ್ಟಣ ಕಟ್ಟಿ ತನ್ನ ಪರಿಚಿತ ವ್ಯಕ್ತಿಯೊಬ್ಬರಿಗೆ ಎಸೆಯಲು ಕೊಟ್ಟಿದರು. ಕೋಗಿಲು ಕ್ರಾಸ್ ಸಮೀಪ ಕಸದ ತೊಟ್ಟಿಗೆ ಎಸೆದು ಹೋಗಿದ್ದರು. ಮರು ದಿನ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಆಗ ಸಿಸಿಟಿವಿ ಪರಿಶೀಲಿಸಿದಾಗ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬ ಕಸದ ತೊಟ್ಟಿಗೆ ಎಸೆಯುವ ದೃಶ್ಯಾವಳಿ ಸಿಕ್ಕಿದೆ.
ಈ ಸುಳಿವು ಆಧರಿಸಿ ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಬಾಲಕಿ ಕೊಟ್ಟಿದ್ದಾಗಿ ಹೇಳಿದ್ದಾರೆ. ಕೊನೆಗೆ ಆ ಬಾಲಕಿಯನ್ನು ವಿಚಾರಣೆ ನಡೆಸಿದಾಗ ಅಪ್ರಾಪ್ತ ಪ್ರೇಮ ಪುರಾಣ ಬಯಲಾಗಿದೆ. ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಗೆ ಸಂತ್ರಸ್ತೆಯ ಪೋಷಕರು ದೂರು ಸಲ್ಲಿಸಿದರು. ಅದರನ್ವಯ ಪೊಕ್ಸೋ ಕಾಯ್ಡೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಭರತ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.