ಪುರಷೋತ್ತಮಪುರ ನಿವಾಸಿ ಗೆಂದಾ ಬಾಯಿ ಬುಡಕಟ್ಟು ಮಹಿಳೆ ಸೌದೆಗೆಂದು ಬೆಳಗ್ಗೆ ಕಾಡಿಗೆ ಹೋಗಿದ್ದರು. ದಾರಿಯಲ್ಲಿ ಹೊಳೆಯುವ ಕಲ್ಲು ಕಂಡಿತು. ಅವರು ಅದನ್ನು ಎತ್ತಿಕೊಂಡು ಮನೆಗೆ ಬಂದು ತಮ್ಮ ಗಂಡನಿಗೆ ತೋರಿಸಿದ್ದಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ಆ ಹೊಳೆಯುವ ಕಲ್ಲನ್ನು ಗುರುತಿಸಲು ಸಾಧ್ಯವಾಗದೆ, ನೇರವಾಗಿ ವಜ್ರದ ಆಫೀಸ್ಗೆ ಬಂದಿದ್ದಾರೆ. ಇಲ್ಲಿ ಸಿಬ್ಬಂದಿಗೆ ಇದನ್ನು ತೋರಿಸಿದಾಗ, ಅದು ಹೊಳೆಯುವ ಕಲ್ಲಲ್ಲ, ಬದಲಾಗಿ ಬೆಲೆಬಾಳುವ ವಜ್ರ ಎಂದು ತಿಳಿಸಿದ್ದಾರೆ.
ವಜ್ರದ ತೂಕ 4.39 ಕ್ಯಾರೆಟ್ ಇದ್ದು, ಇದರ ಅಂದಾಜು ಬೆಲೆ ಸುಮಾರು 20 ಲಕ್ಷ ಎಂದು ಹೇಳಲಾಗುತ್ತಿದೆ. ವಜ್ರವನ್ನು ಕಚೇರಿಯಲ್ಲಿ ಠೇವಣಿ ಇಡಲಾಗಿದೆ. ಮುಂಬರುವ ವಜ್ರದ ಹರಾಜಿನಲ್ಲಿ ಇದನ್ನು ಇರಿಸಲಾಗುವುದು. ವಜ್ರವನ್ನು ಪಡೆಯುವ ಮಹಿಳೆಯ ಆರ್ಥಿಕ ಸ್ಥಿತಿ ತುಂಬಾ ದಯನೀಯವಾಗಿದೆ. ಮಹಿಳೆ ಕಟ್ಟಿಗೆ ಮಾರುವ ಮೂಲಕ ತನ್ನ ಮನೆಯ ಖರ್ಚನ್ನು ನಿಭಾಯಿಸುತ್ತಾರೆ. ಮಹಿಳೆಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದು, ಅವರಿಗೆ ಮದುವೆ ಮಾಡಿಕೊಡಬೇಕಿದೆ.
ವಜ್ರ ಸಿಕ್ಕಿದ ಮೇಲೆ ಮಹಿಳೆಯ ಸಂತಸಕ್ಕೆ ಮಿತಿಯೇ ಇಲ್ಲದಂತಾಗಿದೆ. ಈಗ ವಜ್ರ ಹರಾಜಿನಿಂದ ಬಂದ ಹಣದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಸ್ವಂತ ಮನೆ ಕಟ್ಟುತ್ತೇನೆ ಎಂದು ಗೆಂಡಾಬಾಯಿ ಹೇಳಿದ್ದಾರೆ.