ಬೆಂಗಳೂರು: ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕೆ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ಹಾಕಲಾಗಿದೆ ಎಂಬ ಸಚಿವ ಈಶ್ವರ ಖಂಡ್ರೆ ಆರೋಪಗಳಿಗೆ ಚಿತ್ರತಂಡ ಈಗ ಸ್ಪಷ್ಟನೆ ನೀಡಿದೆ.
ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾ ತಂಡ ಹೆಚ್ ಎಂಟಿ ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಮರಗಳ ಮಾರಣಹೋಮ ನಡೆಸಿದೆ ಎಂದು ಈಶ್ವರ ಖಂಡ್ರೆ ಟ್ವೀಟ್ ಮಾಡಿದ್ದರು. ಈ ಬಗ್ಗೆ ಸ್ಯಾಟ್ ಲೈಟ್ ಪಿಕ್ಚರ್ ಗಳನ್ನು ಬಿಡುಗಡೆ ಮಾಡಲಾಗಿದೆ. ಕೃತ್ಯವೆಸಗಿದ ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದ್ದರು.
ಆದರೆ ಈ ಆರೋಪಗಳಿಗೆ ಚಿತ್ರತಂಡವೂ ಸ್ಪಷ್ಟನೆ ನೀಡಿದೆ. ಸೆಟ್ ಹಾಕಲು ಅನುಮತಿ ಕರಾರು ಪತ್ರಕ್ಕೆ ಸಹಿ ಹಾಕುವ ಮುನ್ನ ತೆಗೆದಿದ್ದ ಸ್ಯಾಟ್ ಲೈಟ್ ಚಿತ್ರ ನಮ್ಮ ಬಳಿಯೂ ಇದೆ. 2022 ರ ಸ್ಯಾಟ್ ಲೈಟ್ ಚಿತ್ರದ ಸಾಕ್ಷ್ಯ ನಮ್ಮ ಬಳಿಯಿದೆ. ನಾವು ಯಾವುದೇ ಪರಿಸರ ನಾಶ ಮಾಡಿಲ್ಲ. ಖಾಲಿ ಇದ್ದ ಜಾಗ ಬಳಸಿಕೊಂಡೇ ಚಿತ್ರೀಕರಣ ಮಾಡಿದ್ದೇವೆ. ಸೆಟ್ ನಿರ್ಮಾಣಕ್ಕೆ ಮುನ್ನ ಅಲ್ಲಿನ ಚಿತ್ರವೂ ನಮ್ಮ ಬಳಿಯಿದೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.
ಟಾಕ್ಸಿಕ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಇದು ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಮಲಯಾಳಂ ಮೂಲದ ಗೀತು ಮೋಹನ್ ದಾಸ್ ಚಿತ್ರದ ನಿರ್ದೇಶಕಿ. ಡ್ರಗ್ಸ್ ಮಾಫಿಯಾ ಕುರಿತಾದ ಕತೆ ಹೊಂದಿರುವ ಸಿನಿಮಾ ಇದಾಗಿದೆ.