ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಅಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ 35ನೇ ಜನ್ಮದಿನದ ಪ್ರಯುಕ್ತ ಅವರ ತಂದೆ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರತಿವರ್ಷ ಕಾರ್ಯಕರ್ತರೊಂದಿಗೆ, ಅಭಿಮಾನಿಗಳೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿದ್ದ ಪ್ರಜ್ವಲ್ ಈಗ ಜೈಲಿನಲ್ಲಿದ್ದಾರೆ. ಮನೆಗೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದೋಷಿಯಾಗಿರುವ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ರೇವಣ್ಣ ಅವರು ಸೋಮವಾರ ರಾತ್ರಿಯೇ ಬಂದು ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಶೃಂಗೇರಿ ಗುರುಗಳ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇಂದು ಬೆಳಗ್ಗೆಯೇ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಬೆಂಗಳೂರಿಗೆ ಹೊರಟಿದ್ದಾರೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಸರ್ಕಾರ ಉಳಿಸಿಕೊಳ್ಳಲು ರೇವಣ್ಣ ದೇವರ ಮೊರೆ ಹೋಗಿದ್ದರು. ಶೃಂಗೇರಿ ದೇವಾಲಯಕ್ಕೆ ಹೋಗಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ದೇವೇಗೌಡ ಕುಟುಂಬ ಹಲವು ವರ್ಷಗಳಿಂದ ಶಾರದಾಂಬ ದೇವಿಯ ಭಕ್ತರಾಗಿದ್ದಾರೆ.