ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಮಾಡಿದ್ದಾರೆಂದು ರಾಜ್ಯಪಾಲರಿಗೆ ಖಾಸಗಿ ದೂರು ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಈಗ ಸಿದ್ದು ಆಪ್ತ ಜಮೀರ್ ಅಹ್ಮದ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಕೋರ್ಟ್ ತನಿಖೆಗೆ ಆದೇಶ ನೀಡಿದಾಗ ಪ್ರತಿಕ್ರಿಯಿಸಿದ್ದು ಜಮೀರ್ ಅಹ್ಮದ್, ಇದು ರಾಜಕೀಯ ಪ್ರೇರಿತ ತೀರ್ಪು ಎಂದದಿದ್ದರು. 100 ಕ್ಕೆ ನೂರು ಇದು ರಾಜಕೀಯ ಪ್ರೇರಿತ ತೀರ್ಪು. ಎಲ್ಲವನ್ನೂ ನಾನು ಇಲ್ಲಿ ಬಿಡಿಸಿ ಹೇಳೋ ಹಾಗಿಲ್ಲ ಎಂದಿದ್ದರು. ನ್ಯಾಯಾಲಯ ತೀರ್ಪನ್ನೇ ರಾಜಕೀಯ ಎಂದಿದ್ದ ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಎದುರಾಗಿತ್ತು.
ಇದರ ಬೆನ್ನಲ್ಲೇ ಅವರು ಮಾಧ್ಯಮಗಳ ಮೂಲಕ ಕ್ಷಮೆ ಕೇಳಿದ್ದರು. ನ್ಯಾಯಾಂಗದ ಬಗ್ಗೆ ನನಗೂ ಗೌರವವಿದೆ. ಖಂಡಿತಾ ನ್ಯಾಯಾಲಯದ ತೀರ್ಪು ಪ್ರಶ್ನಿಸುವ ಹಾಗಿಲ್ಲ. ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದರು. ಆದರೆ ಇಷ್ಟಕ್ಕೇ ಅವರಿಗೆ ಕಂಟಕ ತಪ್ಪಿಲ್ಲ.
ಕೋರ್ಟ್ ಆದೇಶವನ್ನೇ ರಾಜಕೀಯ ಎಂದಿರುವ ಜಮೀರ್ ಅಹ್ಮದ್ ವಿರುದ್ಧ ಅಬ್ರಹಾಂ ಕೋರ್ಟ್ ಗೆ ದೂರು ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ತೀರ್ಪು ಹೇಗಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಈಗ ಹೇಳಿಕೆ ಕೊಡಲು ಹೋಗಿ ಎಡವಟ್ಟು ಮಾಡಿದ್ದ ಜಮೀರ್ ಗೆ ಸಂಕಷ್ಟ ಎದುರಾಗಲಿದೆ.