ಕೊಪ್ಪಳ: ತುಂಡಾಗಿರುವ ತುಂಗಭದ್ರ ಜಲಾಶಯದ ಗೇಟ್ ದುರಸ್ಥಿ ಕಾರ್ಯ ಸದ್ಯದಲ್ಲೇ ನಡೆಯಲಿದೆ. ಇಂದು ಸಂಜೆಯಿಂದಲೇ ಹೊಸ ಗೇಟ್ ಅಳವಡಿಕೆ ಕಾರ್ಯ ಆರಂಭವಾಗಲಿದೆ.
19 ನೇ ಕ್ರಸ್ಟ್ ಗೇಟ್ ತುಂಡಾಗಿರುವುದರಿಂದ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶದ ಜನರಿಗೆ ನೆರೆ ಭೀತಿ ಎದುರಾಗಿದೆ. ನಿನ್ನೆಯಷ್ಟೇ ಬಿಜೆಪಿ ನಾಯಕರು ತುಂಗ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ.
ಇನ್ನೊಂದು ಆತಂಕಕಾರೀ ವಿಚಾರವೆಂದರೆ ತುಂಗಭದ್ರಾ ಜಲಾಶಯದಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಕಂಡುಬಂದಿದೆ ಎನ್ನಲಾಗಿದೆ. ಇದು ಗಂಭೀರವಾಗಿ ಪರಿಗಣಿಸಲೇಬೇಕಾದ ವಿಚಾರವಾಗಿದೆ. ಕ್ರಸ್ಟ್ ಗೇಟ್ ದುರಸ್ಥಿಗೆ ಬೃಹತ್ ಕಬ್ಬಿಣದ ಗೇಟ್ ತಯಾರಿಸಲಾಗಿದೆ. ಇದನ್ನು ಇಂದು ಸಂಜೆಯಿಂದಲೇ ಅಳವಡಿಸಲಾಗುತ್ತದೆ.
ಸದ್ಯಕ್ಕೆ ಅಧಿಕಾರಿಗಳು ಎರಡು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಮೊದಲ ಯೋಜನೆಯಂತೆ ನೀರಿಗೆ ತಡೆಯೊಡ್ಡಿ ಗೇಟ್ ಅಳವಡಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಸಾಧ್ಯವಾಗದೇ ಹೋದರೆ ಅನಿವಾರ್ಯವಾಗಿ ನೀರು ಹೊರಬಿಟ್ಟು ರಿಪೇರಿ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.