ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳವುದಾಗಿ ಸಂದೇಶಗಳು ಬರಲಾರಂಭಿಸಿರುವುದಾಗಿ ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿ ಭರತ್ ಶೆಟ್ಟಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಒಸಾಮಾ ಶಾ ಹೆಸರಿನ ಫೇಸ್‌ಬುಕ್ ಖಾತೆ ಹಾಗೂ ವಾಟ್ಸ್ಯಾಪ್ ಮೂಲಕ 'ಮಸಿ ಬಳಿದು ಅವಮಾನಿಸಿದಕ್ಕೆ ತಿರುಗೇಟು ನೀಡ್ತೀವಿ, ನಿನ್ನ ಸಮಯ ಶುರುವಾಗಿದೆ' ಎಂದು ಬೆದರಿಕೆ ಸಂದೇಶಗಳು ಬರುತ್ತಿವೆ ಎಂದಿರುವ ಭರತ್ ಶೆಟ್ಟಿ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ವರ್ಷ ಮೇ 30ರಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರಿನ ಗಾಂಧಿಭವನದಲ್ಲಿ ರೈತ ಚಳವಳಿ-ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆಯಲ್ಲಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್ ಭಾಗಿಯಾಗಿದ್ದರು. ಸಭೆಯಲ್ಲಿ ಟಿಕಾಯತ್ ಮೇಲೆ ಮಸಿ ಎರಚಲಾಗಿತ್ತು. ಪ್ರಕರಣ ಸಂಬಂಧ ಭರತ್ ಶೆಟ್ಟಿ ಸಹಿತ ನಾಲ್ವರನ್ನ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದರು.