Publish Date: Thu, 13 Jun 2019 (13:43 IST)
Updated Date: Thu, 13 Jun 2019 (13:46 IST)
ಹಲವು ವರ್ಷಗಳ ನಿಧಾನಗತಿಯ ಕಾಮಗಾರಿಯ ನಂತರ ತೊಕೊಟ್ಟು ಫ್ಲೈ ಓವರ್ ಕೆಲಸ ಪೂರ್ಣಗೊಂಡಿದ್ದು ಇಂದಿನಿಂದ ಅದರಲ್ಲಿ ವಾಹನ ಸಂಚಾರ ಆರಂಭವಾಗಿದ್ದರೂ ಆದರೆ ಅವ್ಯವಸ್ಥೆ ತಾಂಡವವಾಡುತ್ತಿದೆ.
ಮಂಗಳೂರಿನಿಂದ ಉಳ್ಳಾಲಕ್ಕೆ ಹೋಗುವ ವಾಹನಗಳಿಗೆ ತಿರುವು ಕೊಡುವ ಬಗ್ಗೆ ಸಮರ್ಪಕ ವ್ಯವಸ್ಥೆ ಮಾಡದಿರುವ ಕಾರಣ ಅಪಘಾತದ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಗಮನಹರಿಸಿ ತೊಕ್ಕೊಟ್ಟುವಿನಿಂದ ಉಳ್ಳಾಲಕ್ಕೆ ಹೋಗಲು ಸಮರ್ಪಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಉಳ್ಳಾಲ ವಲಯ ಡಿವೈಎಫ್‍ಐ ಒತ್ತಾಯಿಸಿದೆ .
ಈ ಭಾಗದ ವಾಹನ ಸವಾರರ ಬಹುದಿನಗಳ ಬೇಡಿಕೆಯಾದ ತೊಕ್ಕೊಟ್ಟು ಫ್ಳೈ ಓವರ್ ಕಾಮಗಾರಿ ಪೂರ್ಣಗೊಳಿಸುವಂತೆ ಡಿವೈಎಫ್‍ಐ ಸಂಘಟನೆ ಹಲವು ಹೋರಾಟಗಳನ್ನು ನಡೆಸಿತ್ತು. ಈ ಹೋರಾಟದಲ್ಲಿ ಪಾಲ್ಗೊಂಡ ಎಲ್ಲಾ ನಾಗರೀಕರಿಗೂ ಸಂಘಟನೆ ಅಭಿನಂದನೆ ಸಲ್ಲಿಸುತ್ತದೆ. ಫ್ಳೈ ಓವರ್ ಪೂರ್ಣಗೊಂಡಿದ್ದರೂ ಅವೈಜ್ಞಾನಿಕ ರೀತಿಯ ಕಾಮಗಾರಿಗಾಗಿ ಫ್ಲೈ ಓವರ್ ನಿರ್ಮಿಸಿದ ನವಯುಗ ಸಂಸ್ಥೆ , ಯೋಜನೆಯ ಬಗ್ಗೆ ಅರಿವಿದ್ದರೂ ಇದರ ಅವೈಜ್ಞಾನಿಕ ನೀಲನಕ್ಷೆಯ ಬಗ್ಗೆ ಚಕಾರ ಎತ್ತದ ಸಂಸದರು ಹಾಗೂ ಈ ಭಾಗದ ಶಾಸಕರು ನೇರ ಹೊಣೆಯಾಗಿದ್ದಾರೆ.
ಈಗ ಕಾಮಗಾರಿ ಪೂರ್ಣಗೊಂಡ ನಂತರ ಇಲ್ಲಿನ ಶಾಸಕರು , ಸಚಿವರೂ ಆದ ಯು.ಟಿ ಖಾದರ್ ಈ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಹೇಳಿಕೆ ನೀಡುತ್ತಿರುವುದು ಕೇವಲ ಒಂದು ರಾಜಕೀಯ ಗಿಮಿಕ್ ಆಗಿದೆ. ಪ್ರತಿದಿನ ತಾವು ಒಡಾಡುವ ರಸ್ತೆಯ ಮಧ್ಯದಲ್ಲೆ ಈ ಕಾಮಗಾರಿ ನಡೆಯುತ್ತಿದ್ದರೂ ಇಷ್ಟು ದಿನ ಸುಮ್ಮನೇ ಇದ್ದು ಈಗ ಏಕಾಏಕಿ ಇಂತಹ ಹೇಳಿಕೆ ಕೊಟ್ಟು ರಾಜಕೀಯ ಲಾಭ ಪಡೆಯುವ ಬದಲು ಈ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕೆಂದು ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು ಒತ್ತಾಯಿಸಿದ್ದಾರೆ .