Select Your Language

Notifications

webdunia
webdunia
webdunia
webdunia

ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಗಂಭೀರ ಚಿಂತನೆ

ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಗಂಭೀರ ಚಿಂತನೆ
Bangalore , ಶನಿವಾರ, 10 ಡಿಸೆಂಬರ್ 2016 (10:20 IST)
ವಿಶ್ವವಿದ್ಯಾಲಯಗಳ ಆಡಳಿತ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ, ಬೋಧಕರು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ಕೆಲಸ ಮಾಡುವುದು ಹಾಗೂ ವಿದ್ಯಾರ್ಥಿಗಳು ಗುರಿಯಿಲ್ಲದೇ ಶಿಕ್ಷಣ ಪಡೆಯುವುದರಿಂದ ವಿಶ್ವವಿದ್ಯಾಲಯಗಳಲ್ಲಿ ವಿಧ್ಯೆಯ ಗುಣಮಟ್ಟ ಕ್ಷೀಣಿಸುತ್ತಿದೆ. ಇದನ್ನು ಸುಧಾರಿಸಲು ಗಂಭೀರ ಚಿಂತನೆಯ ಅವಶ್ಯಕತೆಯಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು. 
 
ಅವರು ಶುಕ್ರವಾರ ಕಲಬುರಗಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ದೇಶದಲ್ಲಿ ತಕ್ಷಶಿಲಾ, ನಳಂದಾ, ಪುಷ್ಪಗಿರಿ, ವಲ್ಲಭಗಳಂತಹ ಹೆಸರಾಂತ ವಿಶ್ವವಿದ್ಯಾಲಯಗಳಿದ್ದವು. ಈ ದೇಶದಲ್ಲಿ ಅರ್ಥಶಾಸ್ತ್ರವನ್ನು ಬೋಧಿಸಲಾಗುತ್ತಿತ್ತು. ಆ ಕಾಲದಲ್ಲಿ ಹೊರದೇಶಗಳಲ್ಲಿ ಯಾವುದೇ ವಿಶ್ವವಿದ್ಯಾಲಯಗಳಿರಲಿಲ್ಲ. ಆದರೆ ಇಂದು ಹೊರ ದೇಶಗಳ ವಿಶ್ವವಿದ್ಯಾಲಯಗಳಿಗೆ ಸ್ಪರ್ಧಿಸುವಂತಹ ಅಂತರರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿಲ್ಲ ಎಂದರು. 
ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಸಾಕ್ಷರತೆಯ ಪ್ರಮಾಣ ತುಂಬಾ ಕಡಿಮೆ ಇದೆ. ದೇಶದ ಮತ್ತು ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣ ಶೇ. 75 ಇದ್ದರೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸಾಕ್ಷರತಾ ಪ್ರಮಾಣ ಶೇ. 65ರಷ್ಟು ಆಗಿದೆ. ಸಾಕ್ಷರತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಪದವೀಧರರು ಅನಕ್ಷರಸ್ಥರಿಗೆ ಶಿಕ್ಷಣ ನೀಡುವಲ್ಲಿ ತೊಡಗಬೇಕು ಎಂದರು. 
 
ಪ್ರಾಥಮಿಕ ಶಾಲೆಗೆ ದಾಖಲಾಗುವ ಹಾಗೂ ಹಾಜರಾಗುವ ಮಕ್ಕಳ ಸಂಖ್ಯೆ ಸರಾಸರಿ ಶೇ. 92 ಇದ್ದರೆ ರಾಜ್ಯದ ಸರಾಸರಿ ಶೇ. 94 ಇದೆ. ಪ್ರೌಢಶಿಕ್ಷಣದಲ್ಲಿ ಶೇ. 92 ಹಾಜರಾತಿ ಇದ್ದರೆ ಇದು ಕಾಲೇಜು ಶಿಕ್ಷಣಕ್ಕೆ ಬಂದಾಗ ಕೇವಲ ಶೇ. 27 ರಷ್ಟು ಆಗುತ್ತಿದೆ. ಅದರಲ್ಲೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರು ಕೇವಲ ಶೇ. 4ರಷ್ಟಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಸೆಳೆಯಲು ವಿಶೇಷ ಪ್ಯಾಕೇಜ್ ರೂಪಿಸಲಾಗುವುದು ಎಂದರು. 
 
ರಾಯಚೂರಿನಲ್ಲಿ ಐಐಐಟಿ ಮತ್ತು ಕಲಬುರಗಿಯಲ್ಲಿ ಐಐಎಂ ಪ್ರಾರಂಭಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಬೆಂಗಳೂರಿನಲ್ಲಿ ವಲ್ಡ್ ಕ್ಲಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ 110 ಕೋಟಿ ರೂ.ಗಳನ್ನು ಕಾಯ್ದಿಸಲಾಗಿದ್ದು, 44 ಎಕರೆ ಭೂ ಪ್ರದೇಶವನ್ನು ಗುರುತಿಸಲಾಗಿದೆ. ಇದೇ ಡಿಸೆಂಬರ್ 13, 14 ಹಾಗೂ 15ರಂದು ಲಂಡನ್ ಸ್ಕೂಲ್ ಫ್ಯಾಕಲ್ಟಿ ಬೆಂಗಳೂರಿಗೆ ಆಗಮಿಸಿ ಸ್ಕೂಲ್ ಆಫ್ ಎಕನಾಮಿಕ್ಸ್‍ನ ರೂಪರೇಷೆಗಳನ್ನು ತಯಾರಿಸಲಿದ್ದಾರೆ ಎಂದರು. 
 
ರಾಜ್ಯದಲ್ಲಿ 23 ಸಾರ್ವಜನಿಕ ವಿಶ್ವವಿದ್ಯಾಲಯಗಳು ಹಾಗೂ 50 ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿವೆ. ಬೆಂಗಳೂರಿನ ವಿಶ್ವವಿದ್ಯಾಲಯವನ್ನು ಮೂರು ವಿಶ್ವವಿದ್ಯಾಲಯಗಳನ್ನಾಗಿ ವಿಂಗಡಿಸಲಾಗುತ್ತಿದೆ. ಮುಂದಿನ ವರ್ಷದಿಂದ ಬೆಂಗಳೂರಿನ ಮಹಾರಾಣಿ ಕಾಲೇಜನ್ನು ಕ್ಲಸ್ಟರ್ ಯುನಿವರ್ಸಿಟಿಯನ್ನಾಗಿ ಮಾರ್ಪಡಿಸಲಾಗುತ್ತಿದೆ ಹಾಗೂ ಮಂಡ್ಯ ಸರ್ಕಾರಿ ಕಾಲೇಜನ್ನು ಯುನಿಟರಿ ಯುನಿವರ್ಸಿಟಿಯನ್ನಾಗಿ ಮಾರ್ಪಡಿಸಲಾಗುತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ಹಲವಾರು ವಿಶ್ವವಿದ್ಯಾಲಯಗಳ ರಚನೆ ಮಾಡಲಾಗುತ್ತಿದೆ ಎಂದರು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೋರಿಯಲ್ಲಿ ಹಳೆ ನೋಟುಗಳು