ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು 7 ಜನರನ್ನು ಅರೆಸ್ಟ್ ಮಾಡಲಾಗಿದೆ. ಪ್ರೀತಿಸಿದ್ದ ಯುವತಿ ಜೊತೆ ಗ್ರಾಮದ ಯುವಕ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಅಮಾನವೀಯ ವರ್ತನೆ ತೋರಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಯುವತಿಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ನಿನ್ನೆ ಮಧ್ಯರಾತ್ರಿ ಯುವತಿ ಪ್ರಿಯಾಂಕಾ ಕರೆದುಕೊಂಡು ಯುವಕ ದುಂಡಪ್ಪ ಓಡಿ ಹೋಗಿದ್ದ. ಬಳಿಕ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಮಹಿಳೆಯರು ಸೇರಿ ಒಂಬತ್ತು ಜನರ ವಿರುದ್ಧ ದೂರು ದಾಖಲಾಗಿದ್ದು 7 ಜನ ಅರೆಸ್ಟ್ ಆಗಿದ್ದಾರೆ.
ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಏಳು ಜನರನ್ನು ಬಂಧಿಸಿದ್ದು ಅವರನ್ನು ಕೋರ್ಟ್ಗೆ ಹಾಜರು ಪಡಿಸುತ್ತೇವೆ. ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.
24 ವರ್ಷದ ಅಶೋಕ್ ನಾಯಕ ಎಂಬ ಯುವಕ, ಪ್ರಿಯಾಂಕಾ ಎಂಬ ಯುವತಿ ಜೊತೆ ಲವ್ ಮಾಡಿ ಓಡಿ ಹೋಗಿದ್ದಾನೆ. ಓಡಿ ಹೋದ ಮೇಲೆ ಹುಡುಗಿ ಕಡೆಯವರು ಹುಡುಗನ ಮನೆಗೆ ಹೋಗಿದ್ದಾರೆ. ಹುಡುಗನ ತಾಯಿನ ಹೊರಗೆ ಎಳೆತಂದು ವಿವಸ್ತ್ರ ಮಾಡಿ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಈ ವಿಷಯ ಗೊತ್ತಾದ ಬಳಿಕ ಸಬ್ ಇನ್ಸ್ಪೆಕ್ಟರ್ ಹೋಗಿ ಆ ಮಹಿಳೆಗೆ ಬಟ್ಟೆ ಕೊಟ್ಟು ಆಸ್ಪತ್ರೆಗೆ ಸೇರಿಸಿದ್ದಾರೆ. ಏಳು ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ. ಯುವಕ-ಯುವತಿ ಫೋನ್ ಟ್ರ್ಯಾಕಿಂಗ್ ಮಾಡ್ತಿದ್ದೇವೆ. ಅವರು ಸಿಕ್ಕಿದ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.