Publish Date: Thu, 11 Jan 2024 (15:02 IST)
Updated Date: Thu, 11 Jan 2024 (17:05 IST)
ಸಿರವಾರ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮವಾಗಿ ಬಣಿವೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಬುಧವಾರ ಮಧ್ಯಾಹ್ನ ತಾಲ್ಲೂಕಿನ ಕೆ.ಗುಡದಿನ್ನಿ ಗ್ರಾ.ಪಂ.ವ್ಯಾಪ್ತಿಯ ಚೌದ್ರಿ ಕ್ಯಾಂಪಿನಲ್ಲಿ ನಡೆದಿದೆ.
ಗ್ರಾಮದ ಪೆದ್ದಮ್ಮ ಹನುಮಂತಪ್ಪ ಎಂಬುವವರಿಗೆ ಸೇರಿದ ಬಣಿವೆ ಎಂದು ತಿಳಿದು ಬಂದಿದೆ. ಕಾಲುವೆಯ ಪಕ್ಕದಲ್ಲಿ ಸಂಗ್ರಹಿಸಿಟ್ಟಿದ್ದ ಬಣಿವೆಗೆ ಬುಧವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರ ಪರಿಣಾಮವಾಗಿ ಬಣಿವೆ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇವು ಸಂಗ್ರಹಿಸಿಟ್ಟಿದ್ದರು. ಸಾವಿರಾರು ರೂಪಾಯಿ ಖರ್ಚು ಮಾಡಿ ಹಾಕಿದ್ದ ಬಣಿವೆ ಹಾನಿಯಾಗಿದ್ದರಿಂದ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.