ರಾಮನಗರ: ಶಾಲೆಗೆ ಬರುವಾಗ ಎರಡು ಜಡೆ ಹಾಕಿಲ್ಲವೆಂದು ಕೋಪಗೊಂಡ ಶಿಕ್ಷಕರಿಬ್ಬರು ಮೂವರು ವಿದ್ಯಾರ್ಥಿನಿಯರ ಜಡೆ ಕತ್ತರಿಸಿದ ಘಟನೆ ಚನ್ನಪಟ್ಟಣ ತಾಲ್ಲೂಕಿನ ಅರಳಾಲುಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಇದೀಗ ಶಿಕ್ಷಕರ ನಡೆಗೆ ಪೋಷಕರು ಆಕ್ರೋಶವನ್ನು ಹೊರಹಾಕಿದ್ದು, ಜಡೆ ಹಾಕಿಲ್ಲವೆಂದು ಕೂದಲನ್ನೇ ಕಟ್ ಮಾಡಿರುವುದು ಯಾವ ಸಂಸ್ಕೃತಿ ಎಂದು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಕರಾದ ಪವಿತ್ರ ಹಾಗೂ ಶಿವಕುಮಾರ್ ಎಂಬವರು ವಿದ್ಯಾರ್ಥಿನಿಯರು ಪ್ರತಿನಿತ್ಯ ಒಂದು ಜಡೆ ಹಾಕಿಕೊಂಡು ಬರುತ್ತಿದ್ದರು. ಹಾಗಾಗಿ ಕೂದಲನ್ನು ಕಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಶಿಕ್ಷಕರಿಬ್ಬರು ಪೋಷಕರ ಎದುರು ತಪ್ಪೊಪ್ಪಿಕೊಂಡಿದ್ದಾರೆ.
ಇದೀಗ ಕೂದಲು ಕಟ್ ಮಾಡಿದ ಶಿಕ್ಷಕರನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿದೆ. ಈ ಸಂಬಂಧ ಚನ್ನಪಟ್ಟಣ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಗೌಡ ಅವರು ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಘಟನೆ ಬಗ್ಗೆ ಮೇಲಾಧಿಕಾರಿಗೆ ಪತ್ರ ಬರೆದು, ಅತಿಥಿ ಶಿಕ್ಷಕರಾದ ಶಿವಕುಮಾರ್ ಹಾಗೂ ಪವಿತ್ರ ಅವರಿಗೆ ಅಮಾನತು ಆದೇಶಕ್ಕೆ ರಾಮನಗರ ಜಿಲ್ಲಾ ಡಿಡಿಪಿಐ ಬಸವರಾಜೇಗೌಡಗೆ ವರದಿ ಸಲ್ಲಿಸಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ವಿವರಣೆ ಮೂಲಕ ವರದಿ ಸಲ್ಲಿಸಿದ್ದು, ಕೂಡಲೇ ಇಬ್ಬರು ಅತಿಥಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.<>