ಬೆಳಗಾವಿ : ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತಿಸುವ ವಿಧಾನವನ್ನು ಸರ್ಕಾರ ಇನ್ನಷ್ಟು ಸರಳೀಕರಣಗೊಳಿಸಿದೆ.
ಈ ಸಂಬಂಧ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನ ಪರಿಷತ್ ನಲ್ಲಿಂದು ಮಾತನಾಡಿದ ಅವರು, ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 95(2)ರಡಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಅಧಿಭೋಗದಾರನು ಅಂತಹ ಜಮೀನನ್ನು ಅಥವಾ ಅದರ ಯಾವುದೇ ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಲು ಇಚ್ಛಿಸಿದರೆ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾಧಿಕಾರಿಯು ನಿಯಮಗಳಿಗೆ ಒಳಪಟ್ಟು ಅನುಮತಿಯನ್ನು ನಿರಾಕರಿಸಬಹುದು ಅಥವಾ ತಾನು ಯುಕ್ತವೆಂದು ಆಲೋಚಿಸುವಂತಹ ಷರತ್ತುಗಳಿಗೆ ಒಳಪಟ್ಟು ಕೊಡಬಹುದಾಗಿದೆ ಎಂದು ಹೇಳಿದರು.