ನೀವೆನಾದ್ರು ಮನೆ ಬಾಡಿಗೆಗೆಯಿದೆ ಅಂತ ಟು ಲೇಟ್ ಬೋರ್ಡ್ ಹಾಕೋರೇ ಸ್ವಲ್ಪ .ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಬಂದ ಇಬ್ಬರು ಖತರ್ನಾಕ್ ಮಹಿಳೆಯರು ಮನೆಯೊಡತಿಯ ಮೇಲೆ ಹಲ್ಲೆ ಮಾಡಿ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಸಿಲಿಕಾನ್ ಸಿಟಿಯ ಲಗ್ಗೆರೆಯ ಪಾರ್ವತಿ ನಗರದ ನಿವಾಸಿ ಶಾಂತಮ್ಮ ಹಲ್ಲೆಗೊಳಗಾದವರು. ಶಾಂತಮ್ಮ ಪತಿ ಕೊರೊನಾದಿಂದ ಮೃತಪಟ್ಟ ಮೇಳೆ ಶಾಂತಮ್ಮ ಒಂಟಿಯಾಗಿ ವಾಸವಾಗಿದ್ದರು. ಶಾಂತಮ್ಮ 4 ಮನೆ ಓನರ್ ಸಹ ಹೌದು. ಇದರಲ್ಲಿ 2 ಮನೆ ಬಾಡಿಗೆಗೆ ಕೊಟ್ಟಿದ್ದರು. ಇನ್ನೂ 2 ಮನೆ ಖಾಲಿ ಇದ್ದವು. ಇದೇ ನೆಪ ಮಾಡಿಕೊಂಡ ಆರೋಪಿ ಮಹಿಳೆಯರು ಖಾಲಿ ಇರುವ ಮನೆಗಳನ್ನು ಬಾಡಿಗೆಗೆ ಕೇಳಿದ್ದರು. 15 ದಿನಗಳಿಂದ ಪದೇಪದೇ ಬಂದು ವಿಚಾರಿಸಿ ಶಾಂತಮ್ಮರನ್ನು ಪರಿಚಯ ಮಾಡಿಕೊಂಡಿದ್ದರು.
ಪರಿಚಯದ ನೆಪದಲ್ಲಿ ಶಾಂತಮ್ಮ ವಾಸವಿರುವ ಏರಿಯಾ, ಮನೆಯಲ್ಲಿ ಯಾರು ಯಾವ ಸಮಯಕ್ಕೆ ಇರುತ್ತಾರೆ ಎಂದು ಸಂಪೂರ್ಣವಾಗಿ ತಿಳಿದುಕೊಂಡು ಸಂಚು ರೂಪಿಸಿದ್ದರು. ಅಲ್ಲದೆ ಶಾಂತಮ್ಮರ ಕುಟುಂಬದ ಬಗ್ಗೆ ಎಲ್ಲಾ ಮಾಹಿತಿ ಪಡೆದುಕೊಂಡಿದ್ದರು.
ಮನೆ ಬಾಡಿಗೆಗೆ ಬರುವುದಾಗಿ ನಂಬಿಸಿದ್ದ ಇಬ್ಬರು ಮಹಿಳೆಯರು ಸಂಪ್ರದಾಯದಂತೆ ಮನೆಗೆ ಬಂದು ಹಾಲು ಉಕ್ಕಿಸುವುದಾಗಿ ಹೇಳಿದ್ದರು. ಅದರಂತೆ ಇಂದು ಶಾಂತಮ್ಮ ಮನೆಗೆ ಬಂದ ಆರೋಪಿಗಳು ಹಾಲು ಉಕ್ಕಿಸಲು ಬಾಡಿಗೆ ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳು ಕಟ್ಟಿಗೆಯಿಂದ ಶಾಂತಮ್ಮರ ತಲೆಗೆ ಬಲವಾಗಿ ಹೊಡೆದು ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನೂ ಶಾಂತಮ್ಮ ಕಿರುಚಿಕೊಂಡಿದ್ದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇನ್ನೂ ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ನಂದಿನಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.