Publish Date: Tue, 23 Dec 2025 (16:20 IST)
Updated Date: Tue, 23 Dec 2025 (16:22 IST)
ಕಲಬುರಗಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ತಡೆ ಮಸೂದೆಯಡಿಯಲ್ಲಿ ಯಾರನ್ನೂ ಯಾವಾಗ ಬೇಕಾದರೂ ಒಳಗೆ ಹಾಕಬಹುದಾದಂತಹ ಕಾನೂನು ಇದಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಟೀಕೆ ಮಾಡಿದರು.
ಈ ವಿಚಾರವಾಗಿ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕವಾಗಿ ದಿವಾಳಿಯರುವ ಕಾಂಗ್ರೆಸ್ ಸರ್ಕಾರ, ಎಲ್ಲ ರಂಗದಲ್ಲೂ ವಿಫಲವಾಗಿದೆ. ಹಳ್ಳಿಯಿಂದ ವಿಧಾನಸೌಧದ ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ. ಈಗಾಗಲೆ ಬಿಎನ್ಎಸ್ ಕಾಯ್ದಯಲ್ಲಿ ಈ ವಿಚಾರವಿದೆ. ಹಾಗಿದ್ದಾಗ ಈ ವಿಶೇಷ ಕಾನೂನು ತರುವಂತಹ ಅಗತ್ಯ ಏನಿದೆ ಎಂದು ಪ್ರಶ್ನೆ ಮಾಡಿದರು.
ಇದನ್ನು ವಿರೋಧಿಸಿ ಎಲ್ಲಾ ಸ್ತರಗಳಲ್ಲಿ ಹೋರಾಟ ಮಾಡುತ್ತಿದ್ದು, ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ. ಅಗತ್ಯ ಬಿದ್ದರೆ ಕಾನೂನು ಹೋರಾಟಕ್ಕೂ ಸಿದ್ದ ಎಂದರು.
ದ್ವೇಷ ಭಾಷಣ ಮಾಡದೆ ಇದ್ರೆ ಬಿಜೆಪಿಯವರಿಗೆ ಯಾಕೆ ಭಯ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 'ರಾಜಕೀಯ ಹೆಗತನ ಸಾಧಿಸುವ ಸರ್ಕಾರ ಇದ್ದಾಗ ಇದು ಬಹಳ ದುರುಪಯೋಗ ಆಗುತ್ತೆ. ಕಾನೂನು ಯಾರ ಕೈಯಲ್ಲಿ ಇದೆ ಎಂಬುದು ಬಹಳ ಮುಖ್ಯವಾಗಿದೆ. ಈ ಸರ್ಕಾರವನ್ನು ಯಾವುದೇ ರೀತಿ ಪ್ರಶ್ನೆ ಮಾಡಬಾರದು ಎಂಬುದು ಇದರ ಉದ್ದೇಶ' ಎಂದು ಟೀಕಿಸಿದರು.