ಬೆಂಗಳೂರು: ರಾಜ್ಯದಲ್ಲಿರುವ ಡ್ರಗ್ಸ್ ತಡೆಗೆ ಮತ್ತು ಅಂತಹ ದಂಧೆಗಳಿಗೆ ಸಂಪೂರ್ಣವಾಗಿ ಕಡಿವಾಣ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಡ್ರಗ್ಸ್ ಕಂಟ್ರೋಲ್ ಆಗುವವರೆಗೆ ದಂಧೆಕೋರರ ವಿರುದ್ಧ ಸಮರ ನಡೆಯಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ (ಸದಸ್ಯ ಅಬ್ದುಲ್ ಜಬ್ಬರ್ ಪ್ರಶ್ನೆಗೆ ಉತ್ತರ ನೀಡಿದ ಅವರು, ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಅವುಗಳ ಬಳಕೆ ಜಾಗತಿಕವಾಗಿ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ಮಾದಕ ವಸ್ತುಗಳ ಮಾರಾಟದ ಉದ್ಯಮ ದೊಡ್ಡ ಮಟ್ಟಕ್ಕೆ ಬೆಳೆದಿದೆ.
ಹೆಚ್ಚಿನ ಲಾಭಕ್ಕಾಗಿ ಅಂತರ್ ರಾಜ್ಯ/ ಅಂತರ್ ರಾಷ್ಟ್ರೀಯ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಈ ಜಾಲಗಳು ಜಗತ್ತಿನಾದ್ಯಾಂತ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವುದರಿಂದ ಈ ಡಗ್ಸ್ ಸಮಸ್ಯೆಯು ಸಾರ್ವತ್ರಿಕವಾಗಿದೆ.
ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ, ಮಾರಾಟ ತಡೆಗಟ್ಟಲು ರಾಜ್ಯ ಸರ್ಕಾರವು ನಾನಾ ಕ್ರಮ ತೆಗೆದುಕೊಂಡಿದೆ ಎಂದರು.
ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿಯನ್ನು ಎದುರಿಸಲು ಹಾಗೂ ತಡೆಗಟ್ಟಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎ.ಎನ್.ಟಿ.ಎಫ್) ಪಡೆಯನ್ನು ಸ್ಥಾಪಿಸಲಾಗಿದೆ.
ಮಾದಕ ದ್ರವ್ಯಗಳ ಅಕ್ರಮ ಸಾಗಾಟ ಮತ್ತು ಜಾಲದ ಕುರಿತು ಸ್ಥಳೀಯ ಬಾತ್ಮೀದಾರರು, ಅಪರಾಧ ವಿಭಾಗದ ಸಿಬ್ಬಂದಿ ಹಾಗೂ ಬೀಟ್ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ.