ಕರ್ನಾಟಕ ಸರ್ಕಾರವು ಈ ವರ್ಷದಿಂದ ಸರ್ಕಾರಿ ಹಾಸ್ಟೆಲ್ಗಳ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ ಮತ್ತು ಪರ್ಸನಲ್ ಡೆವೆಲಪ್ಮೆಂಟ್ ಕೋರ್ಸ್ ಅನ್ನು ಪ್ರಾರಂಭಿಸಲಿದೆ ಎಂದು ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಹೌದು, ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ನಡೆಸುತ್ತಿರುವ ವಸತಿ ನಿಲಯಗಳಲ್ಲಿ ವಾಸಿಸುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದವರು. ಅನೇಕರು ಅಧ್ಯಯನದಲ್ಲಿ ಉತ್ತಮವಾಗಿದ್ದರೂ, ತರಬೇತಿಯ ಕೊರತೆಯಿಂದಾಗಿ ಇಂಗ್ಲಿಷ್ನಲ್ಲಿ ಮಾತನಾಡಲು ಅವರಿಗೆ ಕಷ್ಟವಾಗುತ್ತಿದೆ. ಅವರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರವು ಈ ವರ್ಷ ಸ್ಪೋಕನ್ ಇಂಗ್ಲಿಷ್ ಪಾಠಗಳನ್ನು ಪರಿಚಯಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
"ಕರ್ನಾಟಕದ ಬಡ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿ ಎಂದು ಸ್ಪೋಕನ್ ಇಂಗ್ಲಿಷ್ ತರಗತಿ ಮತ್ತು ಪರ್ಸನಲ್ ಡೆವೆಲಪ್ಮೆಂಟ್ ಕೋರ್ಸ್ ಅನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದ 2,408 ಹಾಸ್ಟೆಲ್ಗಳಲ್ಲಿ (ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ) ವಾಸಿಸುವ ಸುಮಾರು 1.20 ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ. ಯೋಜನೆಗೆ 5 ಕೋಟಿ ಮೀಸಲಿಟ್ಟಿದ್ದೇವೆ ಎಂದು ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಡೆಕ್ಕನ್ ಕ್ರಾನಿಕಲ್ ಗೆ ತಿಳಿಸಿದ್ದಾರೆ.
ಸರ್ಕಾರಿ ಅಥವಾ ಖಾಸಗಿ ಶಾಲೆಗಳ ಅರ್ಹ ಶಿಕ್ಷಕರನ್ನು ಗುರುತಿಸಿ ಅವರಿಗೆ ಗೌರವಧನ ನೀಡಿ ಸರ್ಕಾರ ನೇಮಕ ಮಾಡುತ್ತದೆ. "ಶಾಲಾ ಸಮಯದ ನಂತರ ತರಗತಿಗಳು ನಡೆಯುತ್ತವೆ. ಪ್ರತಿ ವಾರ ಎಷ್ಟು ತರಗತಿಗಳನ್ನು ನಡೆಸಬೇಕು ಎಂಬುದನ್ನು ನಾವು ಶೀಘ್ರದಲ್ಲೇ ನಿರ್ಧರಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.