ಚಹಾ ಮಾರಿ ಕುಟುಂಬಕ್ಕೆ ಆಸರೆಯಾದ ಬಾಲಕಿ
ಆರನೇ ತರಗತಿ ಹುಡುಗಿ ಯಶೋಧಾ ಬೆಳಗ್ಗೆ ಮತ್ತು ಸಂಜೆ ಹೊತ್ತು ಚಹಾ ಮಾರಿ, ಉಳಿದ ಸಮಯದಲ್ಲಿ ವಿದ್ಯಾಭ್ಯಾಸ ನಡೆಸುತ್ತಾಳೆ.
ಗದಗ: ಪುಟ್ಟ ಬಾಲಕಿ ಯಶೋಧಾಳಗೆ ಚೆನ್ನಾಗಿ ಓದೋ ಮೂಲಕ ಆರ್ಮಿ ಸೇರುವ ಆಸೆ, ಬಾಲಕಿಗೆ ನೂರಾರು ಕನಸುಗಳು, ಹಲವಾರು ಆಸೆಗಳು. ಆದ್ರೆ ವಿಧಿಯಾಟ, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡ ಆಕೆಗೆ ಕಿತ್ತು ತಿನ್ನುವ ಬಡತನ ಬೇರೆ. ಹಾಗಂತ ಸುಮ್ಮನೆ ಕೈ ಕಟ್ಟಿ ಕೂತಿಲ್ಲ ಯಶೋಧಾ.
ಚಹಾ ಮಾರಾಟ ಮಾಡುವ ಮೂಲಕ ಕುಟುಂಬಕ್ಕೆ ಒಂದು ಆಧಾರ ಸ್ತಂಭವಾಗಿದ್ದಾಳೆ. ಗದಗ ನಗರದ ಒಕ್ಕಲಗೇರಿ ಓಣಿಯ ನಿವಾಸಿಯಾದ ಯಶೋಧಾ ಸದ್ಯ ಆರನೇ ತರಗತಿ ಓದುತ್ತಿದ್ದಾಳೆ. ಈ ಚಿಕ್ಕ ವಯಸ್ಸಿನಲ್ಲೇ ಅಪ್ಪನನ್ನ ಕಳೆದುಕೊಂಡ ಈಕೆಗೆ ತಾಯಿಯೇ ಎಲ್ಲ. ತಾಯಿ ಅನ್ನಪೂರ್ಣ ಅವರ ಆರೈಕೆಯಲ್ಲಿ ಬೆಳೆದಿರುವ ಯಶೋಧಾಗೆ ಬಡತನದ ಬಿಸಿ ಬಾಲ್ಯದ ಜೀವನದಲ್ಲೇ ತಟ್ಟಿದೆ. ತಾಯಿ ಅನ್ನಪೂರ್ಣ ದೇವರ ಪೂಜಾರಿಕೆ ಮಾಡಿ ಜೀವನ ಸಾಗಿಸಿದ್ರೆ, ಎರಡನೇ ಮಗಳು ಯಶೋಧಾ ಚಹಾ ಮಾರಾಟ ಮಾಡಿ ತಾಯಿ ನಡೆಸ್ತಿರೋ ಬಡತನದ ಬಂಡಿಗೆ ಆಸರೆಯಾಗಿದ್ದಾಳೆ.
ಬೆಳಿಗ್ಗೆ ಸರಿಯಾಗಿ ಆರು ಗಂಟೆಗೆ ತಯಾರಿಸಿ ಕೊಡೋ ಚಹಾ ಥರ್ಮಸ್ ಹಿಡಿಯೋ ಯಶೋಧಾ, ನಗರದ ಮುಳಗುಂದ ನಾಕಾ, ಮಾರುಕಟ್ಟೆ, ಕಿರಾಣಿ ಅಂಗಡಿ, ಅಸ್ಪತ್ರೆಯಂಥ ಹೆಚ್ಚು ಜನ ಇರೋ ಕಡೆ ಹೋಗಿ ಚಹಾ ಮಾರಾಟ ಮಾಡ್ತಾಳೆ. ಪುನಃ ಒಂಬತ್ತು ಗಂಟೆ ಆಗೋದಷ್ಟೆ ತಡ, ಮನೆಗೆ ಬಂದು ಶಾಲೆ ಪಠ್ಯಪುಸ್ತಕ ಹಿಡಿದು ಓದೋಕೆ ಶುರು ಮಾಡ್ತಾಳೆ. ಮತ್ತೆ ಸಂಜೆ ಆಗುವ ಹೊತ್ತಿಗೆ ಅಮ್ಮ ತಯಾರಿಸಿರೋ ಚಹಾ ಥರ್ಮಸ್ ರೆಡಿ ಇರುತ್ತೆ. ಪುನಃ ಯಶೋಧಾ ಧರ್ಮಸ್ ಹಿಡಿದು ಗಲ್ಲಿ ಗಲ್ಲಿ ಸಂಚರಿಸೋಕೆ ಶುರು ಮಾಡ್ತಾಳೆ. ಚಹಾ ಪೂರ್ತಿಯಾಗಿ ಖಾಲಿಯಾದ್ರೆ 250 ರೂ ಗಳಿಸೋ ಬಾಲಕಿ, ಒಂದೊಂದು ಬಾರಿ ಚಹಾ ಉಳಿಸಿಕೊಂಡು ನೂರರಿಂದ ನೂರೈವತ್ತು ರೂ ಹಣದೊಂದಿಗೆ ಸಪ್ಪೆ ಮುಖ ಹಾಕೊಂಡು ಮನೆಗೆ ಬರ್ತಾಳೆ. ಇದೆಲ್ಲ ಯಾಕೆ ಮಾಡ್ತಿದಿಯಾ ಅಂತ ಯಶೋಧಾನ ಕೇಳಿದ್ರೆ, ನಾನು ಮುಂದೆ ಚೆನ್ನಾಗಿ ಓದಬೇಕು. ಆರ್ಮಿ ಸೇರಿ ದೇಶಸೇವೆ ಮಾಡೋ ಆಸೆ ಇದೆ. ಅಲ್ಲದೇ ಅಮ್ಮ ಒಬ್ಬರೇ ಎಷ್ಟು ಅಂತ ದುಡಿಯೋದಕ್ಕೆ ಸಾಧ್ಯ. ಹೀಗಾಗಿ ನಾನೂ ಸ್ವಲ್ಪ ಅಮ್ಮನಿಗೆ ನೆರವಾಗುತ್ತೇನೆ ಅನ್ನೋದು ಚಹಾ ಮಾರೋ ಯಶೋಧಾಳ ಮಾತು.
ಯಶೋಧಾ ಕುಟುಂಬ ಅತ್ಯಂತ ಕಡುಬಡತನದಿಂದ ಕೂಡಿದೆ. ತಾಯಿ ಅನ್ನಪೂರ್ಣ ಒಕ್ಕಲಗೇರಿಯಲ್ಲಿರೋ ಹುಣಸಿಮರದಮ್ಮ ದೇವಿಯ ಪೂಜಾರಿಕೆ ಮಾಡ್ತಾಳೆ. ಇಲ್ಲಿ ಬರೋ ಆರತಿ ತಟ್ಟೆ ಕಾಸು ಇವರ ಕುಟುಂಬದ ಬಂಡಿ ಸಾಗಿಸಲು ಸಾಕಾಗಲು. ಯಶೋಧಾ ಸಹೋದರಿ ಕೂಡ ಲಾಕ್ಡೌನ್ ಹಿನ್ನೆಲೆ ಶಾಲೆಗೆ ಹೋಗ್ತಿಲ್ಲ. ಹಾರ್ಡವೇರ್ ಶಾಪ್ ಒಂದರಲ್ಲಿ ಕೆಲಸಕ್ಕೆ ಹೋಗ್ತಿದಾಳೆ. ಬಡಕುಟುಂಬ ಬಾಡಿಗೆ ಮನೆಯಲ್ಲಿ ವಾಸ ಮಾಡೋಕು ಆಗದೇ ದೇವಸ್ಥಾನದ ಟ್ರಸ್ಟ್ ನವರು ನೀಡಿರೋ ಚಿಕ್ಕ ಕೊಠಡಿಯಲ್ಲೇ ಇವರ ಜೀವನ ಸಾಗ್ತಿದೆ.
ಪ್ರತಿದಿನ ಮೂರು ಹೊತ್ತಿನ ತುತ್ತಿಗೂ ಯಶೋಧಾ ಕುಟುಂಬ ನಾಳೆಯ ಊಟದ ಚಿಂತೆಯಲ್ಲಿರುತ್ತೆ. ನಮ್ಮ ಯಜಮಾನರು ಇದ್ದಿದ್ದರೆ ನನ್ನ ಮಕ್ಕಳಿಗೆ ಈ ರೀತಿ ಕಷ್ಟ ಇರುತ್ತಿರಲಿಲ್ಲ. ಎಲ್ಲರಂತೆ ನನ್ನ ಮಕ್ಕಳೂ ಸಹ ಈ ವಯಸ್ಸಿನಲ್ಲಿ ಆಟ ಆಡಿ ಸಂತೋಷವಾಗಿ ಕಾಲಕಳೆಯುತ್ತಿದ್ರು. ಆದರೆ ವಿಧಿಯಾಟ. ಇಬ್ಬರು ಹೆಣ್ಣುಮಕ್ಕಳ ಜವಾಬ್ದಾರಿಯೂ ನನ್ನ ಮೇಲೆ ಬಿದ್ದಿದೆ. ಇಬ್ಬರಿಗೂ ಮುಂದೆ ಚೆನ್ನಾಗಿ ಓದಿ ಒಳ್ಳೆ ನೌಕರಿ ಪಡೆಯುವ ಆಸೆ ಇದೆ. ಆದರೆ ಅದಕ್ಕೆಲ್ಲ ಸಾಕಷ್ಟು ದುಡ್ಡು ಬೇಕು. ಅದಕ್ಕಂತಾನೆ ಈಗಿನಿಂದಲೇ ಇಬ್ಬರು ಹೆಣ್ಮಕ್ಕಳಿಗೂ ದುಡಿಯೋಕೆ ಕಲಿಸ್ತಿದಿನಿ. ಗುಡಿಲಿ ಬರೋ ಆರತಿ ತಟ್ಟೆ ಕಾಸು ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಸಣ್ಣಮಗಳನ್ನು ಚಹಾ ಮಾರೋಕೆ ಕಳಿಸುತ್ತಿದ್ದೀನಿ ಎಂದು ಹೇಳುವ ತಾಯಿ ಅನ್ನಪೂರ್ಣ ಅವರ ಮಾತು ಎಂಥವರ ಕಣ್ಣಲ್ಲಿ ನೀರು ತರಿಸುತ್ತೆ.
ಸದ್ಯ ಯಶೋಧಾ ಕುಟುಂಬದ ಕಷ್ಟ ನೋಡಿ ಅಕ್ಕಪಕ್ಕದ ಸ್ಥಳೀಯರು ತಮ್ಮ ಕೈಲಾದ ಸಹಾಯ ನೀಡ್ತಿದಾರೆ. ಆದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಹೆಣ್ಣುಮಕ್ಕಳ ಭಾರ ಹೊತ್ತು, ಮನೆ ಯಜಮಾನನ ಸ್ಥಾನದಲ್ಲಿ ಮತ್ತೊಬ್ಬ ಹೆಣ್ಣುಮಗಳು ಜೀವನದ ಚಕ್ರ ಸಾಗಿಸೋದು ಅಂದ್ರೆ, ನಿಜಕ್ಕೂ ಸವಾಲಿನ ಕೆಲಸವೇ ಸರಿ. ಬಡತನ ಅಂದಾಕ್ಷಣ ಭಿಕ್ಷಾಟನೆ ಹಿಡಿಯೋ ಜನರನ್ನ ದಿನವೂ ನೋಡಿರುತ್ತೇವೆ. ಆದರೆ ಪುಟ್ಟ ಹೆಣ್ಣುಮಗಳಾದರೂ, ಚಹಾ ಮಾರಿ ಸ್ವಾಭಿಮಾನದ ಜೀವನ ನಡೆಸಿ, ತನ್ನ ಗುರಿ ಸಾಧಿಸೋಕೆ ಹೊರಟಿರೋ ಯಶೋಧಾಗೆ ನಿಜಕ್ಕೂ ಒಂದು ಸಲಾಂ ಹೇಳಲೇಬೇಕು.