ಜಿಲ್ಲೆಯಲ್ಲಿ ಬೇಸಿಗೆಯೋ ಮಳೆಗಾಲವೋ ಅನ್ನೋದೆ ತಿಳಿಯುತ್ತಿಲ್ಲ. ಆ ಮಟ್ಟಿಗೆ ವರುಣನ ಆರ್ಭಟ ಶುರುವಾಗಿದೆ. ವಿಪರ್ಯಾಸ ಅಂದ್ರೆ ಒಂದೆಡೆ ಅಕಾಲಿಕ ಮಳೆಗೆ ರೈತರ ಬೆಳೆ ನಾಶವಾದರೆ ಇತ್ತ ಸಿಡಿಲಿನ ಹೊಡೆತಕ್ಕೆ ಜೀವಗಳೇ ಬಲಿಯಾಗಿವೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ಸೇರಿ ತಾಲೂಕಿನಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಜೊತೆಗೆ ಸಿಡಿಲಿನ ಅಬ್ಬರಕ್ಕೆ ಕೊಲ್ಹಾರ ತಾಲೂಕಿನ ಚಿರಲದಿನ್ನಿ ಗ್ರಾಮದಲ್ಲಿ ಜಮೀನೊಂದರಲ್ಲಿ ಕುರಿ ನಿಲ್ಲಿಸಿಕೊಂಡಿದ್ದ ಕುರಿಗಾಯಿ ಸಹೋದರರಿಬ್ಬರು ಸಿಡಿಲಿನ ಹೊಡೆತಕ್ಕೆ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಬೀರಪ್ಪ ಶಿವಪ್ಪ ಬಡೆಗೋಳ (20), ಮಹೇಶ ಸತ್ಯಪ್ಪ ಬಡೆಗೋಳ(14) ಸಾವನ್ನಪ್ಪಿದ್ದಾರೆ..
ಇಬ್ಬರು ಸಹ ಸಹೋದರ ಸಂಬಂಧಿಗಳು ಎಂದು ಹೇಳಲಾಗಿದೆ. ಸಂಬಂಧದಲ್ಲಿ ಇಬ್ಬರು ಅಣ್ಣತಮ್ಮಂದಿರು ಎನ್ನಲಾಗಿದೆ. ಸಹೋದರರ ಜೊತೆಗೆ ಇದ್ದ 9 ಕುರಿಗಳು ಸಹ ಸಿಡಿಲ ಬಡಿತಕ್ಕೆ ಸಾವನ್ನಪ್ಪಿವೆ.
ಕುರಿ ಕಾಯುವುದನ್ನೆ ಕಾಯಕ ಮಾಡಿಕೊಂಡಿದ್ದ ಬಡೆಗೋಳ ಕುಟುಂಬಸ್ಥರು ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದವರು. ಬದುಕು ಕಟ್ಟಿಕೊಳ್ಳಲು ಕುರಿಗಳ ಸಮೇತ ವಿಜಯಪುರ ಜಿಲ್ಲೆಗೆ ಬಂದಿದ್ದರು..
ಇಂದು ಸೋಮವಾರ ಕುರಿಗಳ ಸಮೇತ ಚಿರಲದಿನ್ನಿ ಗ್ರಾಮದ ಜಮೀನೊಂದಕ್ಕೆ ಬಂದಿದ್ದಾರೆ. ಈ ವೇಳೆ ಮಳೆ ಬರುತ್ತಿರೋದನ್ನ ಕಂಡ ಸಹೋದರರು ಕುರಿಗಳ ಸಮೇತ ಆಶ್ರಯ ಹುಡುಕಿ ಹೊರಟಾಗಲೇ ಸಿಡಿಲು ಬಡಿದಿದೆ. ಸ್ಥಳದಲ್ಲಿ ಇಬ್ಬರು ಸಹೋದರರು ಅಸುನೀಗಿದ್ದು, 9 ಕುರಿಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಕೊಲ್ಹಾರ ತಹಶೀಲ್ದಾರ ಭೇಟಿ ನೀಡಿದ್ದಾರೆ.