Select Your Language

Notifications

webdunia
webdunia
webdunia
webdunia

ಜನವರಿ 30ರೊಳಗೆ ದೇವಸ್ಥಾನಗಳ ಆಡಿಟ್‌ ರಿಪೋರ್ಟ್‌ ಸಲ್ಲಿಸಲು ತಾಕೀತು

ಜನವರಿ 30ರೊಳಗೆ ದೇವಸ್ಥಾನಗಳ ಆಡಿಟ್‌ ರಿಪೋರ್ಟ್‌ ಸಲ್ಲಿಸಲು ತಾಕೀತು
bangalore , ಗುರುವಾರ, 18 ನವೆಂಬರ್ 2021 (20:56 IST)
ಬೆಂಗಳೂರು: ರಾಜ್ಯದ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಹಲವು ದೇವಸ್ಥಾನಗಳಲ್ಲಿ ಅನೇಕ ವರ್ಷಗಳಿಂದ ಲೆಕ್ಕಪತ್ರ ಪರಿಶೀಲನೆ ನಡೆದಿಲ್ಲ. ಇದು ದೇವಸ್ಥಾನದ ಆಡಳಿತದ ವಿಷಯದಲ್ಲಿ ಜನರಲ್ಲಿ ಸಂಶಯ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಜನವರಿ 30ರೊಳಗಾಗಿ ಲೆಕ್ಕಪತ್ರ ಪರಿಶೀಲನಾ ವರದಿ ಸಲ್ಲಿಸದ ದೇವಸ್ಥಾನದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿಂದು ಧಾರ್ಮಿಕ ದತ್ತಿ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ ನೀಡಿದ್ದಾರೆ.
ವಿಕಾಸಸೌಧಲ್ಲಿ ನಡೆದ ಎ ಮತ್ತು ಬಿ ವರ್ಗದ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಇಲಾಖಾ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಎದುರಿಸುತ್ತಿರುವ ಸಮಸ್ಯೆಗಳ ವಿಸ್ತ್ರತ ವರದಿ ಪಡೆದುಕೊಂಡರು.
ರಾಜ್ಯದಲ್ಲಿ 207 ಎ ದರ್ಜೆ, 139 ಬಿ ದರ್ಜೆ ದೇವಸ್ಥಾನಗಳಿವೆ. ಆದಾಯ ಕಡಿಮೆ ಇರುವ 34,217 ಸಿ ದರ್ಜೆಯ ದೇವಸ್ಥಾನಗಳಿವೆ. ಇವುಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನ, ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನ, ಘಾಟಿ ಸುಬ್ರಮಣ್ಯ ಮತ್ತು ಬೆಂಗಳೂರಿನ ಬನಶಂಕರಿ ದೇವಸ್ಥಾನಗಳಲ್ಲಿ ಮಾತ್ರ ಪ್ರತಿವರ್ಷ ಲೆಕ್ಕ ಪರಿಶೀಲನಾ ವರದಿ ನೀಡಲಾಗಿದೆ. ಇನ್ನುಳಿದವುಗಳಲ್ಲಿ ಹಲವು ದೇವಸ್ಥಾನಗಳ ಲೆಕ್ಕಪತ್ರ ಪರಿಶೀಲನೆ ಸುಮಾರು ಎರಡು ದಶಕಗಳಿಂದ ಬಾಕಿ ಇದೆ. ಈ ರೀತಿ ಲೆಕ್ಕಪತ್ರ ವರದಿಯನ್ನು ನೀಡದೇ ಇರುವುದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಆಡಳಿತದ ಬಗ್ಗೆ ಸಂಶಯ ಹುಟ್ಟು ಹಾಕುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ದೇವಸ್ಥಾನಗಳು ತಮ್ಮ ಲೆಕ್ಕಪತ್ರ ತಪಾಸಣಾ ವರದಿ ಸಲ್ಲಿಸುವುದು ಕಡ್ಡಾಯ. ಮುಂದಿನ ಜನವರಿ 30ರ ಒಳಗಾಗಿ ಲೆಕ್ಕಪತ್ರ ಪರಿಶೀಲನಾ ವರದಿ ಸಲ್ಲಿಸದೇ ಇದ್ದರೆ, ಆಯಾ ದೇವಸ್ಥಾನಗಳ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಐಟಿಎಂಎಸ್‌ ಕಾರ್ಯ ಚುರುಕುಗೊಳಿಸಬೇಕು
ರಾಜ್ಯದ ಸಮಗ್ರ ದೇವಸ್ಥಾನಗಳ ಇಂಟಿಗ್ರೇಟೆಡ್‌ ವೆಬ್‌ಸೈಟ್‌ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ದೇವಸ್ಥಾನಗಳ ಇತಿಹಾಸ, ಐತಿಹ್ಯ ಹಾಗೂ ದೇವಸ್ಥಾನದ ಮಹತ್ವವನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲು ಅನುಕೂಲವಾಗುವಂತೆ ಮಾಹಿತಿಯನ್ನು ಕ್ರೋಢೀಕರಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೇವಸ್ಥಾನಗಳ ಮೇಲೆ ಸರಕಾರದ ನಾಮಫಲಕ
ರಾಜ್ಯದ ಇಲಾಖಾ ಅನೇಕ ದೇವಸ್ಥಾನಗಳ ಮೇಲೆ ಕರ್ನಾಟಕ ಸರಕಾರದ ನಾಮಫಲಕ ಇಲ್ಲ. ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನಗಳ ಮೇಲೆ ಇಲಾಖೆಯ ನಾಮಫಲಕಗಳನ್ನು ಅಳವಡಿಸುವುದು ಕಡ್ಡಾಯ. ಈ ನಿಟ್ಟಿನಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ತಪ್ಪದೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ
ರಾಜ್ಯದ ಧಾರ್ಮಿಕ ಕೇಂದ್ರಗಳನ್ನು ಮತ್ತಷ್ಟು ಪ್ರವಾಸಿ ಸ್ನೇಹೀ ಮಾಢುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವತ್ತ ಹೆಚ್ಚಿನ ಗಮನ ನೀಡಬೇಕು. ಮುಖ್ಯವಾಗಿ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವುದು ಆದ್ಯತೆ ಆಗಬೇಕು. ರಾಜ್ಯದ 25 ಪ್ರಮುಖ ದೇವಸ್ಥಾನಗಳಲ್ಲಿ ತ್ಯಾಜ್ಯ ವಿಲೇವಾರಿ, ಮೂಲಭೂತ ಸೌಕರ್ಯಗಳ ಅಭಿವೃದ್ದಿ ಹೀಗೆ ಹಲವಾರು ವಿಷಯಗಳ ಬಗ್ಗೆ ಡಿಪಿಆರ್‌ ರಚಿಸಲು ಏಜೆನ್ಸಿಯನ್ನು ನೇಮಕ ಮಾಡಲಾಗಿದೆ. ಈ ಏಜೆನ್ಸಿ ಡಿಸೆಂಬರ್‌ ತಿಂಗಳಲ್ಲಿ 4 ದೇವಸ್ಥಾನಗಳ ಡಿಪಿಆರ್‌ ಸಲ್ಲಿಸಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.
ದೇವಸ್ಥಾನಗಳ ಜಾಗ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ದೇವಸ್ಥಾನಗಳ ಜಾಗ ಸಮೀಕ್ಷೆಗೆ ವಿಶೇಷ ಅಭಿಯಾನ ನಡೆಸಲು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಸೂಚನೆ ನೀಡಿದರು. ಒಟ್ಟಾರೆಯಾಗಿ ರಾಜ್ಯದ ದೇವಸ್ಥಾನಗಳನ್ನ ಇನ್ನಷ್ಟು ಅಭಿವೃದ್ಧಿಗೊಳಿಸುವ ಮತ್ತು ಪಾರದರ್ಶಕ ಆಡಳಿತ ಮಾಡುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೃತ್ಯುಂಜಯ ಕೆ.ಎಸ್.ಆರ್.ಟಿ.ಸಿ ಅವ್ಯವಸ್ಥೆ