Select Your Language

Notifications

webdunia
webdunia
webdunia
webdunia

ದೇವಾಲಯದ ಬಳಿ ಮಹಿಳೆ ಶವ ಪತ್ತೆ: ನಿಧಿಗಾಗಿ ಕೊಲೆ ಶಂಕೆ

ದೇವಾಲಯದ ಬಳಿ ಮಹಿಳೆ ಶವ ಪತ್ತೆ: ನಿಧಿಗಾಗಿ ಕೊಲೆ ಶಂಕೆ
bangalore , ಭಾನುವಾರ, 4 ಜುಲೈ 2021 (15:08 IST)
ತುಮಕೂರು, ಜು. 4- ಬೆಟ್ಟದ ಮೇಲಿನ ದೇವಾಲಯವೊಂದರ ಬಳಿ ಮಹಿಳೆ ಶವ ಪತ್ತೆಯಾಗಿದ್ದು, ನಿಧಿಗಾಗಿ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕಳೆದ 15 ದಿನಗಳ ಹಿಂದೆಯೇ ಬೆಟ್ಟದ ಮೇಲಿನ ದೇವಾಲಯದ ಬಳಿ ಮಹಿಳೆ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ 15 ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. 
ತಾಲ್ಲೂಕಿನ ಜಕ್ಕೇನಹಳ್ಳಿ ಬಳಿಯ ಎಂ. ಗೊಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬೆಟ್ಟದ ಮೇಲಿನ ಆಂಜನೇಯಸ್ವಾಮಿ ದೇವಾಲಯದ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಈ ದೇವಾಲಯದ ಒಳಭಾಗದಲ್ಲಿರುವ ಆಂಜನೇಯ ವಿಗ್ರಹದ ಮುಂಭಾಗದಲ್ಲಿ ನಿಧಿಗಾಗಿ ಅಗೆದು ಪೂಜೆ ಸಲ್ಲಿಸಿರುವ ದೃಶ್ಯ ಕಂಡು ಬಂದಿವೆ.
ಈ ದೇವಾಲಯದ ಬಳಿ ಕುರಿಗಾಹಿಗಳು ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ದುರ್ವಾಸನೆ ಬಂದಿದ್ದು, ದೇವಾಲಯದ ಅಕ್ಕಪಕ್ಕ ಎಲ್ಲ ಹುಡುಕಾಡಿ ನೋಡಿದಾಗ ಮಹಿಳೆಯ ಕೂದಲು ಕಂಡು ಬಂದಿದ್ದು, ಮೃತದೇಹ ಸಂಪೂರ್ಣ ಗುರುತು ಸಿಗದಂತಾಗಿದೆ. 
ತಕ್ಷಣ ಕುರಿಗಾಹಿಗಳು ದೇವಾಲಯದ ಬಳಿ ಶವ ಬಿದ್ದಿರುವ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗಾಬರಿಗೊಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.  
ಈ ಸುದ್ದಿ ತಿಳಿದ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತಪ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. 
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೆ ಈ ಮಹಿಳೆಯ ಸಾವಿನ ರಹಸ್ಯ ಬಹಿರಂಗಗೊಳ್ಳಬೇಕಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಶವ ಪರೀಕ್ಷೆಯ ನಂತರ ತಿಳಿಯಲಿದೆ.
ನಿಧಿಗಾಗಿ ನಡೆಯಿತೇ ಮಹಿಳೆ ಕೊಲೆ..?
ಎಂ. ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಆಗಿಂದಾಗ್ಗೆ ನಿಧಿಗಾಗಿ ಕಿಡಿಗೇಡಿಗಳು ಅಗೆದು ದೇವಾಲಯ ಆವರಣವನ್ನು ಹಾಳು ಮಾಡುತ್ತಿದ್ದರು ಎನ್ನಲಾಗಿದೆ. 
ದೇವಾಲಯದ ಬೆಟ್ಟದ ಮೇಲಿರುವ ಕಾರಣ ಗ್ರಾಮಸ್ಥರು ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಹುಣ್ಣಿಮೆ, ಅಮಾವಾಸ್ಯೆಗಳಂದು ಈ ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತೆಂದು ಹೇಳಲಾಗಿದೆ. 
ಈ ದೇವಾಲಯದಲ್ಲಿ ಕಿಡಿಗೇಡಿಗಳು ನಿಧಿ ಆಸೆಯಿಂದ ಅಗೆದು ಮಹಿಳೆಯನ್ನು ಬಲಿ ಕೊಟ್ಟಿರಬಹುದು ಎಂಬ ಶಂಕೆಯನ್ನು ಕೆಲ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆದರೆ ಇದು ಸತ್ಯವೋ ಅಥವಾ ಕೇವಲ ಊಹಾಪೋಹವೋ ಎಂಬುದನ್ನು ಪೊಲೀಸರ ತನಿಖೆಯಿಂದಷ್ಟೆ ಖಚಿತಪಡಿಸಿಕೊಳ್ಳಬೇಕಿದೆ. 
ಘಟನೆಯ ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖಾ ಕಾರ್ಯ ಕೈಗೊಂಡಿದ್ದಾರೆ.
webdunia

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಎಂ ಕೃಷ್ಣ ಭೇಟಿ ಮಾಡಿದ ಮಂಡ್ಯ ಮಧುಮಾದೇಗೌಡ