ಬೆಂಗಳೂರು: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರ ಅಭಿಜಯನಿಗೆ ಉಚಿತ ಶಿಕ್ಷಣ ಕೊಡಿಸುವುದಾಗಿ ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದ್ದರು. ಅದೀಗ ಈಡೇರಿದೆ. ಆರ್ ವಿ ಕಾಲೇಜು ಅಭಿಜಯನಿಗೆ ಮುಂದಿನ ಶಿಕ್ಷಣಕ್ಕೆ ತನ್ನ ಕಾಲೇಜಿನಲ್ಲಿ ಸೀಟು ನೀಡಿದೆ.
ಅಭಿಜಯ ಆಗಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದ. ಫಲಿತಾಂಶ ಬಂದ ಖುಷಿಯಲ್ಲಿ ತಂದೆ-ತಾಯಿಯೊಡನೆ ಪಹಲ್ಗಾಮ್ ಪ್ರವಾಸಕ್ಕೆ ತೆರಳಿದ್ದ. ದುರದೃಷ್ಟವಶಾತ್ ಕಣ್ಣೆದುರಲ್ಲೇ ತಂದೆಯನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಿ ಅಭಿಜಯ ಮುಂದೆ ಏನು ಓದಬೇಕೆಂದಿರುವೆ ಎಂದೆಲ್ಲಾ ವಿಚಾರಿಸಿದ್ದರು.
ಅಷ್ಟೇ ಅಲ್ಲದೆ, ಬೆಂಗಳೂರಿನ ಆರ್ ವಿ ವಿಶ್ವ ವಿದ್ಯಾಲಯದ ಬಳಿ ಮಾತನಾಡಿ ಅಭಿಜಯನ ಮುಂದಿನ ಓದಿಗೆ ಸಹಾಯ ಮಾಡುವಂತೆ ಕೋರಿದ್ದರು. ಸಂಸದರ ಮನವಿಗೆ ಸ್ಪಂದಿಸಿದ ವಿಶ್ವ ವಿದ್ಯಾಲಯ ಅಭಿಜಯನಿಗೆ ಉಚಿತ ಶಿಕ್ಷಣದ ಭರವಸೆ ನೀಡಿತ್ತು.
ಇದು ಕೇವಲ ಭರವಸೆ ಮಾತ್ರವಾಗಿಲ್ಲ. ಇದೀಗ ಅಭಿಜಯ ಆರ್ ವಿವಿಯ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಪದವಿ ವಿಭಾಗಕ್ಕೆ ದಾಖಲಾಗಿದ್ದಾನೆ. ಆತನಿಗೆ ಉಚಿತ ಶಿಕ್ಷಣ ನೀಡಲು ಆರ್ ವಿ ವಿಶ್ವ ವಿದ್ಯಾಲಯ ಮುಂದಾಗಿದೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. ಉಚಿತ ಶಿಕ್ಷಣ ನೀಡಲು ಮುಂದಾಗಿರುವುದಕ್ಕೆ ಆರ್ ವಿ ಶಿಕ್ಷಣ ಸಂಸ್ಥೆಗೆ ಧನ್ಯವಾದ ಸಲ್ಲಿಸಿದ್ದಾರೆ.