Publish Date: Fri, 24 Jun 2022 (12:12 IST)
Updated Date: Fri, 24 Jun 2022 (12:14 IST)
ಬೆಂಗಳೂರು : 2024ಕ್ಕೆ ಕರ್ನಾಟಕ ಇಬ್ಭಾಗವಾಗೋದು ಖಚಿತ ಎಂಬ ಸಚಿವ ಉಮೇಶ್ ಕತ್ತಿ ಮಾತಿಗೆ ಪಕ್ಷಾತೀತವಾಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಉಮೇಶ್ ಕತ್ತಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಕರ್ನಾಟಕ ಸ್ಥಾಪನೆಯಾಗಿದೆ. ಕರ್ನಾಟಕವನ್ನು ಒಡೆಯುವ ಯೋಚನೆ ಮಾಡುವುದೇ ನಾಡು-ನುಡಿಗೆ ಬಗೆವ ದ್ರೋಹವಾಗುತ್ತದೆ.
ಸಚಿವರಾದ ಉಮೇಶ್ ಕತ್ತಿಯವರು ಜವಾಬ್ದಾರಿ ಸ್ಥಾನದಲ್ಲಿರುವವರು. ಪಕ್ಷ ಇಲ್ಲವೆ ಸರ್ಕಾರದ ಮಟ್ಟದಲ್ಲಿ ಅಂತಹ ಚರ್ಚೆ ನಡೆಯದೆ, ರಾಜ್ಯ ಒಡೆಯುವ ಯೋಜನೆಯ ಬಗ್ಗೆ ಮಾತನಾಡಿರಲಾರರು. ಅವರು ಹೇಳಿರುವುದು ಸುಳ್ಳಾಗಿದ್ದರೆ ಇಂತಹ ಬೇಜವಾಬ್ದಾರಿ ಹೇಳಿಕೆಗಾಗಿ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇದರ ಸತ್ಯಾಸತ್ಯತೆಗಳನ್ನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ಪಷ್ಟಪಡಿಸಬೇಕು ಸಿದ್ದರಾಮಯ್ಯ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. ಈ ವಿವಾದದಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಈ ಬಗ್ಗೆ ಕತ್ತಿಯನ್ನೇ ಕೇಳಿ.. ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.