Select Your Language

Notifications

webdunia
webdunia
webdunia
webdunia

ನೈತಿಕತೆಯಿದ್ದರೆ ತನ್ವೀರ್ ಸೇಠ್ ರಾಜೀನಾಮೆ ನೀಡಲಿ: ಹೊರಟ್ಟಿ

ನೈತಿಕತೆ
ಹುಬ್ಬಳ್ಳಿ , ಭಾನುವಾರ, 13 ನವೆಂಬರ್ 2016 (12:07 IST)
ನೈತಿಕತೆಯಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.
 
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೃಶ್ಯ ಮಾಧ್ಯಮದಲ್ಲಿ ತನ್ವೀರ್ ಸೇಠ್ ಅರೆನಗ್ನ ಚಿತ್ರಗಳನ್ನುನೋಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹಾಗಿದ್ದಾಗಲೂ ಸೇಠ್ ತಾನೇನೂ ತಪ್ಪೇ ಮಾಡಿಲ್ಲ ಎಂದು ಸಮರ್ಥಿಕೊಳ್ಳುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಇನ್ನಿತರ ಕಾಂಗ್ರೆಸ್ ಮುಖಂಡರು ನಿಂತಿದ್ದಾರೆ. ಇದು ಸಭ್ಯ ರಾಜಕಾರಣವಾಗಿದ್ದು, ಸಾರ್ವಜನಿಕರು ತಲೆ ತಗ್ಗಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೈತಿಕತೆಯೇನಾದರೂ ಇದ್ದರೇ ತಕ್ಷಣ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
 
ಈ ಹಿಂದೆ ಬಿಜೆಪಿ ಸದಸ್ಯರು ಸದನದ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆಂದು ಅವರ ರಾಜೀನಾಮೆ ಪಡೆಯುವವರೆಗೂ ಸಿದ್ದರಾಮಯ್ಯ ಹೋರಾಟ ನಡೆಸಿದ್ದರು. ಈಗ ಅವರದ್ದೇ ಪಕ್ಷದ ಸಚಿವರು ಅಂತಹದ್ದೇ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅದನ್ನು ಹೇಗೆ ಸಮರ್ಥಿಕೊಳ್ಳುತ್ತಾರೆಂದು ನೋಡೋಣ. ಸದ್ಯದಲ್ಲಿಯೇ ವಿಧಾನ ಸಭೆ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷಗಳಿಗೆ ಇದೊಂದು ಪ್ರಬಲ ಅಸ್ತ್ರವಾಗಿದೆ. ಅದಕ್ಕೂ ಪೂರ್ವ ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ತಪ್ಪು-ಒಪ್ಪುಗಳ ಕುರಿತು ನಂತರ ನಿರ್ಧರಿಸಲಿ. ಕೆ.ಜೆ. ಜಾರ್ಜ್ ಅವರನ್ನು ಸಂಪುಟದಿಂದ ಕೈ ಬಿಟ್ಟು ಮತ್ತೆ ವಾಪಸ್ಸು ಕರೆತಂದಂತೆ, ಸೇಠ್ ನಿರಪರಾಧಿ ಎಂದಾದರೆ ಪುನಃ ಸೇರಿಸಿಕೊಳ್ಳಲಿ ಎಂದು ಹೊರಟ್ಟಿ ಸಲಹೆ ನೀಡಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಟಾಚಾರಕ್ಕಾಗಿ ಧಾರವಾಡ ಜಿಲ್ಲೆಯ ಬರ ಅಧ್ಯಯನ ನಡೆಸಿದ್ದಾರೆನ್ನುವುದು ಅರಿವಾಗಿದೆ. ಅವರಿಗೆ ಈ ಭಾಗದ ರೈತರ ಬಗ್ಗೆ ಕಳಕಳಿಯಿದ್ದರೆ ರಾತ್ರಿ ವೇಳೆ ಟಾರ್ಚ್ ಬೆಳಕಲ್ಲಿ ಅಧ್ಯಯನ ನಡೆಸುತ್ತಿರಲಿಲ್ಲ. ಒಂದು ದಿನ ಇಲ್ಲಿಯೇ ಇದ್ದು, ಮಾರನೇ ದಿನ ರೈತರ ಹೊಲಗಳಿಗೆ ಭೇಟಿ ನೀಡುತ್ತಿದ್ದರು. ರಾಜಕೀಯ ಪ್ರಚಾರಕ್ಕಾಗಿ ಮಾಡಿದ ಬರ ಅಧ್ಯಯನ ಇದಾಗಿದೆ ಎಂದು ಬಸವರಾಜ ಹೊರಟ್ಟಿ ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿ ಪರಾರಿಯಾದಕ್ಕೆ ಬೆತ್ತಲೆ ಮೆರವಣಿಗೆ