ಹೊರ ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿಯೇ ಇಂದಿನಿಂದ ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆ ಆರಂಭವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ವಿದೇಶದಿಂದ ಬರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಡುವ ಆರ್ ಟಿಪಿಸಿಆರ್ ಪರೀಕ್ಷೆ ವರದಿ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳುಹಿಸಿ ಅಲ್ಲಿ ಅವರನ್ನು 7 ದಿನಗಳ ಕ್ವಾರಂಟೈನ್ ಗೆ ಒಳಪಡಿಸಲಾಗುವುದು. ಕ್ವಾರಂಟೈನ್ ನಲ್ಲೇ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ರೋಗ ಲಕ್ಷಣ ಇರುವವರಿಗೆ, ಆರ್ ಟಿಪಿಸಿಆರ್ ವರದಿ ನೆಗೆಟಿವ್ ಬಂದರೆ, 5ನೇ ದಿನ ಅವರನ್ನು ಮತ್ತೆ ಪರೀಕ್ಷೆ ಮಾಡಲಾಗುವುದು. ಅದರಲ್ಲೂ ನೆಗೆಟಿವ್ ವರದಿ ಬಂದರೆ 7 ದಿನಗಳ ಬಳಿಕ ಅವರು ಕ್ವಾರಂಟೈನ್ ನಿಂದ ಹೊರಬರಬಹುದು. ಒಂದು ವೇಳೆ ಆರ್ ಟಿಪಿಸಿಆರ್ ವರದಿಯಲ್ಲಿ ಪಾಸಿಟಿವ್ ಬಂದರೆ ಅವರನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತದೆ. ಪರೀಕ್ಷೆ ಕಡ್ಡಾಯವಾಗಿರುವುದರಿಂದ ಪ್ರಯಾಣಿಕರಿಗೆ ಸ್ವಲ್ಪ ತಡವಾಗಬಹುದು. ಆದರೆ ಇದು ಅನಿವಾರ್ಯ ಎಂದು ತಿಳಿಸಿದರು.