Daily Horoscope

Select Your Language

Notifications

webdunia
webdunia
webdunia
webdunia

ಒಂದು ಸಾಲಿನ ನಿರ್ಣಯ ಸಾಲದು, ವೈಜ್ಞಾನಿಕ ಪರಿಹಾರ ಅಗತ್ಯ: ಸುನೀಲ್ ಕುಮಾರ್

V Sunil Kumar MLA
ಬೆಂಗಳೂರು: ಪಶ್ಚಿಮ ಘಟ್ಟವನ್ನು ನಾಶ ಮಾಡಿ ಜನಸಂಸ್ಕೃತಿಯನ್ನು ಉಳಿಸುತ್ತೇವೆ ಎಂಬುದು ಭ್ರಮೆ. ಪಶ್ಚಿಮ ಘಟ್ಟದ ಜನ ಭಾವನೆ ಮತ್ತು ಬದುಕು ಎರಡನ್ನೂ ಒಟ್ಟಿಗೆ ಕಟ್ಟಿಕೊಂಡವರು. ಅದು ಎರಡೂ ಬೇರೆ ಬೇರೆ ಅಲ್ಲ. ಘಟ್ಟದ ಜನ ಅರಣ್ಯ ಇಲಾಖೆಯ ಬೇರೆ ಬೇರೆ ಕಾಯಿದೆಯ ಕಾರಣಕ್ಕೆ ತೊಂದರೆ ಎದುರಿಸುತ್ತಿದ್ದಾರೆ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂದು ಶಾಸಕ ವಿ. ಸುನೀಲ್ ಕುಮಾರ್ ಅವರು ಆಗ್ರಹಿಸಿದ್ದಾರೆ. 
 
ವಿಧಾನಸಭೆಯ ಕಲಾಪದಲ್ಲಿ ಇಂದು ಮಾತನಾಡಿದ ಅವರು, ಕಸ್ತೂರಿರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿ ಕೇವಲ ಒಂದು ಸಾಲಿನ ನಿರ್ಣಯ ಮಾಡಿ ಕಳುಹಿಸಿದರೆ ಏನೂ ಲಾಭ ಆಗುವುದಿಲ್ಲ. ಏನಾದರೂ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ಒಂದು ಸಾಲಿನ ನಿರ್ಣಯ ಮಾಡಿದರೆ ಹಸಿರು ಪೀಠ ಅದನ್ನು ಕಸದ ಬುಟ್ಟಿಗೆ ಹಾಕಲಿದೆ. 2014 ರಲ್ಲಿ ಯಾವ ಅಂಶಕ್ಕೆ ಒಪ್ಪಿಕೊಂಡಿದ್ದೆವು. ಈಗ ಯಾಕೆ ವಿರೋಧಿಸುತ್ತಿದ್ದೇವೆ ಎಂಬುದನ್ನು ವಿವರಿಸಬೇಕು. ಕೇಂದ್ರಕ್ಕೆ ಕೇವಲ ನಿಯೋಗ ಕರೆದುಕೊಂಡು ಹೋದರೂ ಪ್ರಯೋಜನವಿಲ್ಲ ಎಂದರು. 
 
ಕೇರಳ ಮಾದರಿ ಎಂದು ಹೇಳುವ ನಾವು ಕರ್ನಾಟಕ ಮಾದರಿಯನ್ನೂ ಮಾಡಬೇಕಾಗಿದೆ. ತೊಂದರೆಗೆ ಸಿಲುಕುವ ಗ್ರಾಮಗಳ ಸರ್ವೆ ನಂಬರ್‍ವಾರು ನಕ್ಷೆ ತಯಾರು ಮಾಡಬೇಕು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರುವ ಕುಟುಂಬಗಳು ಎಷ್ಟು, ಜನ ಎಷ್ಟು ಎಂಬ ಸಮೀಕ್ಷೆ ಆಗಬೇಕಿದೆ. ಯಾವ ಪ್ರದೇಶ ಹೊರಗಿಡಬೇಕು ಎಂದು ಹೇಳುತ್ತೇವೊ ಅದನ್ನು ಮ್ಯಾಪ್‍ನಲ್ಲಿ ತೋರಿಸಬೇಕು ಎಂದು ಸಲಹೆ ನೀಡಿದರು. 
ಗ್ರಾಮ ಪಂಚಾಯಿತಿಯಲ್ಲಿ ಸಮಿತಿ ಮಾಡಬೇಕು. ಕಾಲಾವಕಾಶ ಪಡೆದು ಒಳ್ಳೆಯ ಅಧಿಕಾರಿ ನೇಮಿಸಿ ವೈಜ್ಞಾನಿಕ ಕ್ರಮ ಕೈಗೊಳ್ಳುವತ್ತ ಸರ್ಕಾರ ಗಮನ ಹರಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬುದ್ಧಿ ಹೇಳಿ ಸರ್ಕಾರ ಕೆಲಸ ಮಾಡಿಸಲಿ ಎಂದು ಆಗ್ರಹಿಸಿದರು. 
 
ಪಶ್ಚಿಮ ಘಟ್ಟಗಳಲ್ಲಿ ಸಾವಿರಾರು ವರ್ಷಗಳಿಂದ ಕಟ್ಟಿದ ಸಂಸ್ಕೃತಿ ಇದೆ. ಇದನ್ನು ಕಾಯಿದೆ ಮೂಲಕ ತೆಗೆಯಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟ ಕೇವಲ ಸೆಲ್ಫಿ ಪಾಯಿಂಟ್ ಆಲ್ಲ. ಜನಜೀವನದ ಪಾಯಿಂಟ್. ಪರಿಸರವನ್ನು ಉಳಿಸುವಲ್ಲಿ ಇಲ್ಲಿನ ಜನರ ಕೊಡುಗೆ ಅಪಾರ ಎಂದು ಹೇಳಿದರು. 
 
ಇದು ಕೇವಲ ಪಶ್ಚಿಮ ಘಟ್ಟದ ಜನರ ಜೀವನದ ಪ್ರಶ್ನೆ ಅಲ್ಲ. ಇಡೀ ರಾಜ್ಯದ ಜನರ ಜೀವನ ಇದರ ಮೇಲೆ ನಿಂತಿದೆ.  ಕಂಪ್ಯೂಟರ್ ಮುಂದೆ ಕೂತವರು ಪರಿಸರ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಆದರೆ ಮರದ ಕೆಳಗೆ ಕೂತವರು ಮಾತನಾಡುತ್ತಿಲ್ಲ. ಇದು ವಾಸ್ತವ. ಆದ್ದರಿಂದ ಜನರ ಜೀವ ಮತ್ತು ಘಟ್ಟ ಉಳಿಯುವಂತಹ ಮಧ್ಯದ ದಾರಿಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.  
 
ಕಸ್ತೂರಿರಂಗನ್ ವರದಿಗಿಂತ ಅಪಾಯದ ಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ರಾಜ್ಯದಲ್ಲಿ 23 ಅಭಯಾರಣ್ಯಗಳಿವೆ. ಕಾಡುಪ್ರಾಣಿ ಮತ್ತು ಪಕ್ಷಿಗಳು ಮನೆಗಳಿಗೆ ಬರಲಾರಂಭಿಸಿವೆ. ಕಾಡು ನೋಡದವರಿಗೆ ಇದು ಸೋಜಿಗ ಆಗಬಹುದು. ಆದರೆ ಪಶ್ಚಿಮ ಘಟದಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ನಡೆಯುತ್ತಿದೆ ಎಂದು ವಿವರಿಸಿದರು. 
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾಯಿದೆಗಳನ್ನು ಇಟ್ಟುಕೊಂಡು ದೊಡ್ಡ ಮಾತನಾಡುತ್ತಾರೆ. ಬೆಂಗಳೂರಿನಲ್ಲಿ ಕುಳಿತು ಪರಿಸರ ಸೂಕ್ಷ್ಮ ಪ್ರದೇಶ ಉಳಿಸಿ ಎಂದು ಹೇಳುವುದು ಸುಲಭ. ಕಸ್ತೂರಿರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ವಲಯ ಎಲ್ಲಾ ಗೊಂದಲ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಎಂದರೆ ಜನರಿಗೆ ತೊಂದರೆ ಕೊಡುವ ಇಲಾಖೆ ಎಂದಂತಾಗಿದೆ ಎಂದು ಹೇಳಿದರು. 
 
ಅರಣ್ಯ ಇಲಾಖೆ ಸುತ್ತೋಲೆಗಳು ಜನರಿಗೆ ತೊಂದರೆ ಮಾಡುತ್ತಿವೆ. ಯಾವುದೇ ಚಟುವಟಿಕೆಗೆ ಪ್ರಾದೇಶಿಕ ಆಯುಕ್ತರ ಅನುಮತಿ ಪಡೆಯಬೇಕಾಗಿದೆ. ಸಾವಿರಾರು ಅರ್ಜಿಗಳು ಅನುಮತಿಗಾಗಿ ಬಾಕಿ ಉಳಿದಿವೆ. ಕುಡಿಯುವ ನೀರಿಗೆ ಪೈಪ್ ಹಾಕಲೂ ಅನುಮತಿ ಪಡೆಯಬೇಕಾಗಿದೆ. ಬೆಂಗಳೂರಿನಲ್ಲಿ ಸುರಂಗ ಮಾರ್ಗ ಮಾಡಲು ಅನುಮತಿ ಬೇಗ ಸಿಗುತ್ತದೆ. ಆದರೆ ಪಶ್ಚಿಮ ಘಟ್ಟದಲ್ಲಿ ನೀರಿಗೆ ಪೈಪ್ ಹಾಕಿಕೊಳ್ಳಲು ಅನುಮತಿ ಸಿಗಲು ವರ್ಷ ಹಿಡಿಯುತ್ತದೆ ಎಂದು ತಿಳಿಸಿದರು. 
 
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಆದೇಶದಿಂದ ಜನರಿಗೆ ತೊಂದರೆಯಾಗಲಿದೆ. ಇದು ಒಕ್ಕಲೆಬ್ಬಿಸಲು ಅವಕಾಶ ನೀಡುತ್ತದೆ. ಪಶ್ಚಿಮ ಘಟ್ಟದ ಜನರ ಸಮಸ್ಯೆ ತಿಳಿದರೆ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಜನರ ನ್ಯಾಯ ಸಮ್ಮತ ಬದುಕಿಗೆ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಲಿ ಎಂದು ಆಗ್ರಹಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್ ಹಾಕಿಸಿಕೊಳ್ಳುವಾಗ ಬೈಕ್‌ನಿಂದ ಇಳಿದಿದ್ದಕ್ಕೆ ಈ ಸವಾರ ಪ್ರಾಣಪಾಯದಿಂದ ಪಾರಾದ, ಆಗಿದ್ದೇನು ಗೊತ್ತಾ, Video