Publish Date: Mon, 21 Sep 2026 (11:42 IST)
Updated Date: Mon, 21 Sep 2026 (13:32 IST)
ಬೆಂಗಳೂರು: ವಿವಿಧ ಗಂಭೀರ ಸಮಸ್ಯೆ- ಸಂಕಷ್ಟಗಳನ್ನು ಚರ್ಚಿಸಲು ಮೂರು ದಿನ ಅಧಿವೇಶನ ನಡೆಸಿದರೆ ಸಾಲದು; ಅದನ್ನು ಒಂದು ವಾರಕ್ಕೆ ವಿಸ್ತರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆದಿದ್ದೇವೆ ಅಂತ ಹೇಳಿದ್ದಾರೆ. ಕಸ್ತೂರಿರಂಗನ್ ವರದಿಯ ಬಗ್ಗೆ ಚರ್ಚೆ ಮಾಡಬೇಕು. ರಾಜ್ಯದಲ್ಲಿ ಇರುವಂತಹ ಭೀಕರ ಬರಗಾಲ ಸಂಕಷ್ಟದಲ್ಲಿ ಇರುವಂತಹ ರೈತರ ಬಗ್ಗೆಯೂ ಚರ್ಚೆ ಮಾಡಬೇಕು ಅಂತ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದ್ದಾರೆ. ಮಾನ್ಯ ವಿಪಕ್ಷ ನಾಯಕರು, ಬಿಜೆಪಿ ಮತ್ತು ಜೆಡಿಎಸ್ ನ ಶಾಸಕರು ಹಾಗೂ ನಾವೆಲ್ಲರೂ ಕನಿಷ್ಠ ಒಂದು ವಾರ ಅಧಿವೇಶನ ನಡೆಸಬೇಕು ಅನ್ನುವ ಆಗ್ರಹವನ್ನು ಮಾಡಿದ್ದೇವೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳು ಮೊನ್ನೆ ತೀರ್ಥಹಳ್ಳಿಯಲ್ಲಿ ಮಾತನಾಡುತ್ತಾ ಬಿಜೆಪಿಯವರು ಜನರ ಭಾವನೆಯ ಮೇಲೆ ಆಡಳಿತ ನಡೆಸುತ್ತಾರೆ. ಕಾಂಗ್ರೆಸ್ ನವರು ಜನರ ಬದುಕನ್ನು ಕಟ್ಟಿ ಕೊಡುವ ಕೆಲಸ ಮಾಡುತ್ತಾರೆ ಎಂದು ಅರ್ಥದಲ್ಲಿ ತಿಳಿಸಿದ್ದಾರೆ. ಅಧಿವೇಶನವನ್ನು ದಯವಿಟ್ಟು ವಿಸ್ತರಿಸಿ ಎಂದು ನಾವು ವಿನಂತಿ ಮಾಡಿದ್ದೇವೆ. ಕಳೆದ ಮೂರು ಕಾಲು ವರ್ಷದಲ್ಲಿ ಈ ಕಾಂಗ್ರೆಸ್ ಸರ್ಕಾರ ಜನರ ಬದುಕನ್ನು ಕಟ್ಟಿ ಕೊಡುವ ಕೆಲಸ ಮಾಡಿದೆಯೇ ಅಥವಾ ಜನರ ಬದುಕಿನ ಜೊತೆ ಚೆಲ್ಲಾಟ ಆಡಿದೆಯೇ ಎಂಬುದೂ ಚರ್ಚೆ ಮಾಡಬೇಕಾಗುತ್ತದೆ ಎಂದು ನುಡಿದರು.
ಇದರ ಮಧ್ಯೆ ಬಿಜೆಪಿಯಿಂದ ನಾವು ಹಮ್ಮಿಕೊಂಡ ಬಳ್ಳಾರಿ ಚಲೋ 10 ದಿನದ ಪಾದಯಾತ್ರೆ ಬಹಳ ಹೆಚ್ಚು ಪರಿಣಾಮಕಾರಿ ಆಗಿದೆ. ಒಂದು ರೀತಿ ಮುಖ್ಯಮಂತ್ರಿಗಳು ವಿಚಲಿತರಾದಂತೆ ಕಾಣುತ್ತಿದೆ. ಎಷ್ಟು ವಿಚಲಿತರಾಗಿದ್ದರು ಅಂತ ಹೇಳಿದರೆ, ಬರ ವೀಕ್ಷಣೆಗೆ ಹೆಲಿಕಾಪ್ಟರ್ ತೆಗೆದುಕೊಂಡು ಬರುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು ಎಂದು ಗಮನ ಸೆಳೆದರು.
ನಮ್ಮ ಹೋರಾಟದ ಒತ್ತಡಕ್ಕೆ ಮಣಿದು ವಿಶೇಷ ಅಧಿವೇಶನ ಕರೆಯುವ ಪರಿಸ್ಥಿತಿ ಆಗಿದೆ. ಹಾಗಾಗಿ ಈ ಅಧಿವೇಶನದಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ನಮ್ಮ ಜೆಡಿಎಸ್ ಮಿತ್ರಪಕ್ಷ ಒಟ್ಟಾಗಿ ಒಂದಾಗಿ ರೈತರಪರವಾಗಿ ಒತ್ತಾಯ ಮಾಡಲಿವೆ. ಪಶ್ಚಿಮಘಟ್ಟ ಅರಣ್ಯದ ರಕ್ಷಣೆ ಆಗಬೇಕು. ಕಾಡಂಚಿನ ರೈತರ ರಕ್ಷಣೆಯೂ ಆಗಬೇಕಾಗುತ್ತದೆ. ಅವರ ಬದುಕನ್ನು ಕಟ್ಟಿ ಕೊಡುವ ಕೆಲಸವೂ ಆಗಬೇಕಾಗುತ್ತದೆ. ಇವೆಲ್ಲವನ್ನು ಸಮಗ್ರವಾಗಿ ಈ ಅಧಿವೇಶನದಲ್ಲಿ ನಾವು ಚರ್ಚೆ ಮಾಡುತ್ತೇವೆ ಎಂದು ವಿವರಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ