Publish Date: Fri, 14 Aug 2026 (14:11 IST)
Updated Date: Fri, 14 Aug 2026 (14:15 IST)
ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಿಂದ ವಿರೋಧ ಪಕ್ಷಗಳು ದೂರ ಉಳಿದಿರುವುದಕ್ಕೆ ಅಧ್ಯಕ್ಷರ ಸ್ಥಾನಕ್ಕೆ ಯಾವುದೇ ಅಗೌರವ ತೋರಿಸುವ ಉದ್ದೇಶವಿಲ್ಲ. ಬದಲಾಗಿ, ಆ ಸ್ಥಾನಕ್ಕೆ ಹಿರಿಯರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಡೆದ ಪ್ರಕ್ರಿಯೆಯನ್ನು ವಿರೋಧಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಚಾರವನ್ನು ಹಿರಿಯ ಸಚಿವರಾದ ಪರಮೇಶ್ವರ್ ಅವರೂ ಹಾಗೂ ಮಾನ್ಯ ಸುನಿಲ್ ಅವರೂ ಸದನದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ವೇದಿಕೆಯಾಗಿರುವ ವಿಧಾನಸಭೆಯ ಕಲಾಪಗಳನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಇಂದು ಸಭಾಧ್ಯಕ್ಷರಿಗೆ ದೊರೆತಿದೆ. ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿ ಬಂದಿರುವ ಶಾಸಕರು ತಮ್ಮ ಕ್ಷೇತ್ರದ ಜನರ ಆಶಯ, ನಿರೀಕ್ಷೆ ಹಾಗೂ ಸಮಸ್ಯೆಗಳನ್ನು ಸದನದ ಮೂಲಕ ವ್ಯಕ್ತಪಡಿಸುತ್ತಾರೆ.
ಆದ್ದರಿಂದ ಸದನದ ಘನತೆ, ಗೌರವ ಹಾಗೂ ಸಂಸದೀಯ ಪರಂಪರೆಯನ್ನು ಕಾಪಾಡುವುದು ಸಭಾಧ್ಯಕ್ಷರ ಪೀಠದ ಪವಿತ್ರ ಜವಾಬ್ದಾರಿಯಾಗಿದೆ. ಸಭಾಧ್ಯಕ್ಷರ ಪೀಠ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಪೀಠವಲ್ಲ. ಅದು ಪ್ರಜಾಪ್ರಭುತ್ವದ ಹಾಗೂ ಜನರ ವಿಶ್ವಾಸದ ಪೀಠವಾಗಿದೆ ಎಂದು ಅವರು ಹೇಳಿದರು.
ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ, ಪ್ರತಿಯೊಬ್ಬ ಸದಸ್ಯನಿಗೂ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಮಾನ ಅವಕಾಶ ದೊರೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಅದೇ ಸಂದರ್ಭದಲ್ಲಿ ಸದನದ ನಿಯಮಗಳು, ಸಂಸದೀಯ ಸಂಪ್ರದಾಯಗಳು ಹಾಗೂ ಶಿಸ್ತನ್ನು ಕಾಪಾಡುವುದು ಕೂಡ ಅಷ್ಟೇ ಮುಖ್ಯ.
ಸಭಾಧ್ಯಕ್ಷರು ಯಾವುದೇ ಪಕ್ಷಪಾತವಿಲ್ಲದೆ ಎಲ್ಲ ಸದಸ್ಯರಿಗೂ ಸಮಾನ ಅವಕಾಶ ನೀಡಿ, ಸದನದ ಘನತೆಯನ್ನು ಎತ್ತಿಹಿಡಿದು, ಅತ್ಯಂತ ಸಮತೋಲನದಿಂದ ಕಲಾಪಗಳನ್ನು ಮುನ್ನಡೆಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ವಿಜಯೇಂದ್ರ ಹೇಳಿದರು.
ಪ್ರಜಾಪ್ರಭುತ್ವದ ದೇವಾಲಯ ಎಂದು ಕರೆಯಲ್ಪಡುವ ಈ ಸದನದಲ್ಲಿ ರಾಜ್ಯದ ರೈತರ ಸಮಸ್ಯೆಗಳು, ಕೂಲಿ ಕಾರ್ಮಿಕರ ಸಂಕಷ್ಟಗಳು, ಯುವಕರು ಮತ್ತು ಮಹಿಳೆಯರ ವಿಚಾರಗಳು, ವಿದ್ಯಾರ್ಥಿಗಳ ಸಮಸ್ಯೆಗಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಧ್ವನಿಗೆ ಅವಕಾಶ ದೊರೆಯಬೇಕು.
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಚರ್ಚೆ ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸದನವು ಆರೋಗ್ಯಕರ ಹಾಗೂ ರಚನಾತ್ಮಕ ಚರ್ಚೆಗಳಿಗೆ ಸಾಕ್ಷಿಯಾಗಬೇಕು. ಜನಪರ ನಿರ್ಧಾರಗಳು ಕೈಗೊಳ್ಳುವ ವೇದಿಕೆಯಾಗಿ ವಿಧಾನಸಭೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಸಭಾಧ್ಯಕ್ಷರು ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತು ಎಲ್ಲ ಸದಸ್ಯರ ಅಭಿಪ್ರಾಯಗಳಿಗೂ ಸೂಕ್ತ ಮನ್ನಣೆ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ, ವಿರೋಧ ಪಕ್ಷಕ್ಕೂ ಅಷ್ಟೇ ಜವಾಬ್ದಾರಿ ಇದೆ.
ವಿರೋಧ ಪಕ್ಷಗಳ ಸದಸ್ಯರಿಗೆ ಸಮರ್ಪಕ ಅವಕಾಶ ಕಲ್ಪಿಸಿ ಸದನದ ಕಲಾಪಗಳನ್ನು ಮುನ್ನಡೆಸುವಲ್ಲಿ ಸಭಾಧ್ಯಕ್ಷರು ಸಹಕಾರ ನೀಡಬೇಕು. ಸದನದ ಸುಗಮ ಹಾಗೂ ಗೌರವಯುತ ಕಲಾಪಗಳಿಗೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಬಿ.ವೈ. ವಿಜಯೇಂದ್ರ ಅವರು ಭರವಸೆ ನೀಡಿದರು.
ನೂತನ ಸಭಾಧ್ಯಕ್ಷರಾಗಿ ಗೌರವಾನ್ವಿತ ಸ್ಥಾನವನ್ನು ಅಲಂಕರಿಸಿರುವ ಮಾನ್ಯ ಅಧ್ಯಕ್ಷರಿಗೆ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ