ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(FTII)ಯಲ್ಲಿ ಮತ್ತೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಿಂಗಳೊಳಗೆ ನಡೆದ ಎರಡನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಆಕ್ಟಿಂಗ್ ವಿಷಯದಲ್ಲಿ ಮೂರನೇ ವರ್ಷದ ಪಿಜಿ ಡಿಪ್ಲೋಮಾ ಮಾಡುತ್ತಿದ್ದ 25 ವರ್ಷದ ಯುವತಿ ಕಾಮಾಕ್ಷಿ ಬೊಹರಾ(Kamakshi Bohara) ಆತ್ಮಹತ್ಯೆ ಮಾಡಿಕೊಂಡ ಯುವತಿ.
ನೈನಿತಲ್ (Nainital) ನಿವಾಸಿಯಾಗಿದ್ದಳು. ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಂತೆಯೇ ಈಕೆಯೂ ಕೂಡ ಒಂಟಿ ಆಗಿದ್ದಳು ಎಂದು ವರದಿಗಳು ತಿಳಿಸಿವೆ. ಗುರುವಾರ ರಾತ್ರಿ ತನ್ನ ಹಾಸ್ಟೆಲ್ ಕೊಠಡಿಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಈಕೆಯ ಶವ ಪತ್ತೆಯಾಗಿದೆ.
ಗುರುವಾರ ಬೆಳಗ್ಗೆಯೇ ಈಕೆ ತನ್ನ ಬೆಡ್‌ಶೀಟ್‌ನ್ನು ಬಳಸಿ ನೇಣಿಗೆ ಶರಣಾಗಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಲ್ಲಿ ಯಾವುದೇ ಡೆತ್‌ನೋಟ್ ಲಭ್ಯವಾಗಿಲ್ಲ. ಕೆಲ ಮಾಹಿತಿಗಳ ಪ್ರಕಾರ ಬೊಹರಾ ಅವರು ಪ್ರತಿದಿನ ಕಾಲೇಜಿನಲ್ಲಿ ಉಪನ್ಯಾಸಕರನ್ನು ಭೇಟಿಯಾಗುತ್ತಿದ್ದಳು. ಆದರೆ ಅಂದು ಬಾರದೆ ಇದ್ದು, ದೂರವಾಣಿ ಕರೆಯನ್ನು ಸ್ವೀಕರಿಸದೇ ಇದ್ದ ಹಿನ್ನೆಲೆಯಲ್ಲಿ ಉಪನ್ಯಾಸಕರು ಆಕೆ ಇದ್ದ ಹಾಸ್ಟೆಲ್‌ಗೆ ಕೆಲ ವಿದ್ಯಾರ್ಥಿಗಳನ್ನು ಕಳಿಸಿ ನೋಡಿ ಬರುವಂತೆ ತಿಳಿಸಿದ್ದರು. ಯಾರೊಂದಿಗೂ ಬೆರೆಯದೇ ಸದಾ ಒಬ್ಬಂಟಿಯಾಗಿದ್ದ ವಿದ್ಯಾರ್ಥಿನಿ ಕಾಮಾಕ್ಷಿ ಬೊಹರಾಳ ಗುಣ ತಿಳಿದಿದ್ದ, ಉಪನ್ಯಾಸಕರು ವಿದ್ಯಾರ್ಥಿಗಳನ್ನು ಕಳಿಸಿದ್ದರು. ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ತೆರಳಿ ಆಕೆಯ ರೂಮ್ ಬಳಿ ಹೋದಾಗ ಬಾಗಿಲು ಹಾಕಿತ್ತು. ಬಾಗಿಲು ಬಡಿದರು ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಅವರು ಭದ್ರತಾ ಸಿಬ್ಬಂದಿಯನ್ನು ಕರೆದಿದ್ದಾರೆ. ನಂತರ ಅವರು ಬಂದು ಬಾಗಿಲು ಮುರಿದು ನೋಡಿದಾಗ ಮೃತದೇಹ ಫ್ಯಾನ್‌ಗೆ ನೇತು ಹಾಕಿಕೊಂಡಿರುವುದು ಕಂಡು ಬಂದಿದೆ.