ತುಮಕೂರು ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕಚೇರಿಯ ಕುರ್ಚಿಯಲ್ಲಿ ಕುಳಿತಿದ್ದಾಗಲೇ ಕರವಸ್ತ್ರದ ಮುಖಾಂತರ ತಮ್ಮ ಕುತ್ತಿಗೆಯನ್ನು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸಂಭವಿಸಿದೆ. ಅವರ ಕಚೇರಿಯ ಸಿಬ್ಬಂದಿ ಕೂಡಲೇ ಧಾವಿಸಿ ಆತ್ಮಹತ್ಯೆ ಯತ್ನದಿಂದ ಅವರನ್ನು ಪಾರು ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸುಬ್ರಮಣ್ಯ ತಮಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಮತ್ತು ಹಣಕ್ಕಾಗಿ ಪೀಡಿಸುತ್ತಿದ್ದರಿಂದ ತೀವ್ರ ಮನನೊಂದು ತಾವು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಅವರು ಹೇಳಿದ್ದಾರೆ. ಈ ಕುರಿತು ಸುಬ್ರಮಣ್ಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುಬ್ರಮಣ್ಯ ಅವರಿಗೆ ತಾವು ಸಹಕರಿಸದೇ ಇದ್ದಿದ್ದರಿಂದ ವಾರಕ್ಕೊಮ್ಮೆ ಸಭೆ ಕರೆದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ದೂರಿದ್ದಾರೆ. ತನ್ನ ಬಳಿ ಚುನಾವಣೆ ವೆಚ್ಚಗಳಿಗೆ ಬೇಕೆಂದು ಸುಮಾರು 2 ಲಕ್ಷ ರೂ. ಹಣವನ್ನು ಸುಬ್ರಮಣ್ಯ ತೆಗೆದುಕೊಂಡಿದ್ದಾರೆ ಮತ್ತು ತನಗೆ ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದರು ಎಂದೂ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ಡೌನ್‍ಲೋಡ್ ಮಾಡಿಕೊಳ್ಳಿ