ಸ್ಮಾರ್ಟ್‌ಫೋನ್ ಲಾಕ್ ಕೋಡ್ ಹೇಳಲು ನಿರಾಕರಿಸಿದ್ದಕ್ಕೆ ಪತಿ ಮಹಾಶಯನೊಬ್ಬ ಪತ್ನಿಯ ಕೊಲೆ ಮಾಡಿಸಿದ ಹೇಯ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಪೂನಂ ವರ್ಮಾ ಕೊಲೆಯಾದ ದುರ್ದೈವಿಯಾಗಿದ್ದು ಆಗಸ್ಟ್ 29 ರಂದು ಘಟನೆ ನಡೆದಿತ್ತು.
ಮೃತಳ ಪತಿ, ಆರೋಪಿ ವಿನೀತ್ ಕುಮಾರ್ ದಿವಾಕರ್ ಸ್ನೇಹಿತರು ಆಗಸ್ಟ್ 29 ರ ರಾತ್ರಿ ಪೂನಂ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಮರುದಿನ ಬೆಳಿಗ್ಗೆ ನಾಲ್ಕು ವರ್ಷದ ಮಗು ತಾಯಿ ಎದ್ದೇಳುತ್ತಿಲ್ಲವೆಂದು ನೆರೆಮನೆಯವರಿಗೆ ವಿಷಯ ತಿಳಿಸಿದಾಗ ದುಷ್ಕೃತ್ಯ ಬೆಳಕಿಗೆ ಬಂದಿತ್ತು.
ಈ ಸಮಯದಲ್ಲಿ ವಿನೀತ್ ವ್ಯವಹಾರದ ನೆಪ ಒಡ್ಡಿ ಕಾನ್ಪುರದಲ್ಲಿದ್ದುದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಗೊತ್ತಾಗಿದೆ.
ವಿನೀತ್ ಮೊಬೈಲ್ ಕರೆ ಆಧರಿಸಿ ವಿಚಾರಣೆಗೊಳಪಡಿಸಿದಾಗ ಎಲ್ಲ ವಿಚಾರ ಬೆಳಕಿಗೆ ಬಂದಿದೆ. ತನ್ನ ಪತ್ನಿ ಇತ್ತೀಚಿಗೆ ಸದಾ ಫೋನ್‌ನಲ್ಲಿಯೇ ವ್ಯಸ್ತಳಾಗಿರುತ್ತಿದ್ದಳು. ನನ್ನನ್ನು ಮತ್ತು ಮಗಳನ್ನು ನಿರ್ಲಕ್ಷಿಸುತ್ತಿದ್ದಳು. ಯಾರು ಕೂಡ ಫೋನ್ ಬಳಸದಂತೆ ಲಾಕ್ ಕೋಡ್ ಹಾಕಿದ್ದಳು. ಆಕೆಯ ಅನುಮಾನಾಸ್ಪದ ವರ್ತನೆಯಿಂದ ಬೇಸತ್ತು ಕೊಲೆಗೈಯ್ಯಲು ನಿರ್ಧರಿಸಿದೆ. ಸ್ನೇಹಿತರಿಗೆ 80,000 ಹಣ ಕೊಟ್ಟು ಹತ್ಯೆ ಮಾಡಿಸಿ ದರೋಡೆ ನಡೆಸಿ ಕೊಲೆ ಮಾಡಲಾಗಿದೆ ಎಂಬಂತೆ ಬಿಂಬಿಸಿದೆವು ಎಂದಾತ ಬಾಯ್ಬಿಟ್ಟಿದ್ದಾನೆ.