Publish Date: Sat, 28 Jun 2025 (14:41 IST)
Updated Date: Sat, 28 Jun 2025 (14:44 IST)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಆರೋಪ ನಿಜವಾಗಿದೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಎನ್ಐಎಗೆ ವಹಿಸಿತ್ತು. ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಕೃತ್ಯದಲ್ಲಿ ಭಾಗಿಯಾದವರಿಗೆ ನಿಷೇಧಿತ ಪಿಎಫ್ಐ ಜೊತೆ ಸಂಪರ್ಕವಿತ್ತು ಎಂದು ಪತ್ತೆ ಮಾಡಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಈ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ವೇಳೆ ಪಿಎಫ್ಐ ಸಂಘಟನೆ ಜೊತೆ ಇದ್ದ ನಂಟು ಬೆಳಕಿಗೆ ಬಂದಿದೆ. 12 ಆರೋಪಿಗಳ ಬ್ಯಾಂಕ್ ಖಾತೆಗೆ ವಿದೇಶೀ ಫಂಡಿಂಗ್ ಇರುವುದು ಪತ್ತೆಯಾಗಿದೆ.
ಇದಲ್ಲದೆ ಸ್ಥಳೀಯ ವ್ಯಕ್ತಿಗಳಿಂದಲೂ ಆರೋಪಿಗಳ ಖಾತೆಗೆ ಹಣ ರವಾನೆಯಾಗಿದೆ. ಪಿಎಫ್ಐ ಜೊತೆ ಗುರುತಿಸಿಕೊಂಡಿರುವ ವಿದೇಶೀ ಶಕ್ತಿಗಳು ಫಂಡಿಂಗ್ ಮಾಡಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಈಗ ಫಂಡಿಂಗ್ ಮಾಡಿದವರಿಗಾಗಿ ಎನ್ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ.