ಈಗ ಪ್ರತಿಪಕ್ಷ ನಾಯಕರಾಗಿರುವ ಆರ್. ಅಶೋಕ್ ಐದು ವರ್ಷ ಗೃಹಸಚಿವರಾಗಿದ್ದಾಗ ಯಾಕೆ ಕರ ಸೇವಕರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಿಲ್ಲ ಎಂದು ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣೆಗಾಗಿ ಹಿಂದೂ ಮುಸ್ಲಿಂರನ್ನು ಬೇರ್ಪಡಿಸಿ ಅದರ ಲಾಭವನು ಪಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಶೆಟ್ಟರ್ ಆರೋಪಿಸಿದರು.
ಪ್ರಹ್ಲಾದ್ ಜೋಷಿಯವರ ಆರೋಪಕ್ಕೆ ಉತ್ತರಿಸುತ್ತಾ, ನಾನು ಕೇವಲ ಹತ್ತು ತಿಂಗಳು ಮಾತ್ರ ಸಿಎಂ ಆಗಿದ್ದೆ. ಆ ಅವಧಿಯಲ್ಲಿ ನನ್ನ ಕೈಲಾದ ಪ್ರಯತ್ನವನ್ನು ನಾನು ಮಾಡಿದ್ದೇನೆ. ಈ ಬಗ್ಗೆ ದಾಖಲೆಗಳೂ ಸಹ ಇವೆ ಎಂದು ನುಡಿದ ಜಗದೀಶ್ ಶೆಟ್ಟರ್, ಇಷ್ಟು ವರ್ಷ ಬಿಜೆಪಿಯವರಿಗೆ ಕರಸೇವಕರ ಮೇಲೆ ಇಲ್ಲದ ಕಾಳಜಿ ಈಗ ಬಂದಿದೆ ಎಂದು ಲೇವಡಿ ಮಾಡಿದರು.
ಇಡೀ ಪ್ರಕರಣದ ಹಿಂದೆ ಪ್ರಹ್ಲಾದ್ ಜೋಷಿಯವರ ಕೈವಾಡವಿದೆ ಎಂದು ಆರೋಪಿಸಿದ ಜಗದೀಶ್ ಶೆಟ್ಟರ್ , ಜನರಲ್ಲಿ ಭಾವನಾತ್ಮಕ ಸಂಗತಿಗಳನ್ನು ಉದ್ರೇಕಿಸಿ ಇದರ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದರು.