ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಂಡ ಕಂಡವರ ಮೇಲೆ ದಾಳಿ ಮಾಡುತ್ತಿವೆ. ಒಂದೇ ತಿಂಗಳಲ್ಲಿ ಸುಮಾರು 2 ಸಾವಿರದಷ್ಟು ಜನ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಕೆಲವರಲ್ಲಿ ರೇಬಿಸ್ ಲಕ್ಷಣಗಳು ಕಂಡು ಬಂದಿವೆ.
ಸಿಟಿಯಲ್ಲಿ ಒಂದು ದಿನಕ್ಕೆ 80ಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ರಾತ್ರಿ ಹೊತ್ತು ರಸ್ತೆಯಲ್ಲಿ ಮಕ್ಕಳು ಓಡಾಡಲು ಭಯ ಪಡುತ್ತಿದ್ದಾರೆ. ಮನೆಯ ಮುಂದೆ ಮಕ್ಕಳು ಆಟ ಆಡುವಾಗ ಅಟ್ಯಾಕ್ ಮಾಡುತ್ತಿವೆ. ಸಿಟಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
2020 ರಿಂದ ಇಲ್ಲಿಯವರೆಗೆ 52 ಸಾವಿರಕ್ಕೂ ಹೆಚ್ಚು ಜನ ಶ್ವಾನ ಕಡಿತಕ್ಕೆ ಒಳಗಾಗಿದ್ದಾರೆ. 2020 ರ ಫೆಬ್ರವರಿಯಲ್ಲಿ ಓರ್ವ ಮಹಿಳೆ ನಾಯಿ ಕಡಿತದಿಂದ ಮೃತಪಟ್ಟಿದ್ದಾರೆ. 31 ವರ್ಷದ ಮಹಿಳೆಗೆ, ನಾಯಿ ಕಚ್ಚಿದ್ದರೂ ಚಿಕಿತ್ಸೆ ಪಡೆದಿರಲಿಲ್ಲ. ನಿಮ್ಹಾನ್ಸ್ ಪ್ರಯೋಗಾಲ ಯದಲ್ಲಿ ಪರೀಕ್ಷೆ ನಡೆಸಿದಾಗ ರೇಬಿಸ್ ಇರುವುದು ಖಚಿತವಾಗಿತ್ತು. ಎರಡು ವರ್ಷದಲ್ಲಿ ಬೆಂಗಳೂರಿನ 52 ಸಾವಿರದ 262 ಮಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ತಿಂಗಳಿಗೆ ಸರಾಸರಿ 2,177 ಮಂದಿ ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗಿದ್ದಾರೆ. ಸಂತಾನ ಹರಣ ಚಿಕಿತ್ಸೆಗೆ ಪಾಲಿಕೆ ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.