ರಾಜ್ಯಸಭೆ ಚುನಾವಣೆಗೆ ಮತ ನೀಡಲು ಶಾಸಕರಿಂದ ಕೋಟಿ ಕೋಟಿ ಹಣದ ಬೇಡಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಬಂಡಾಯ ಶಾಸಕರ ಪಾತ್ರವಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಗಂಭೀರವಾಗಿ ಆರೋಪಿಸಿದ್ದಾರೆ.
ರಾಜ್ಯಸಭೆ ಚುನಾವಣೆ ಹೆಸರಿನಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಲಾಗಿದೆ. ಸ್ಟಿಂಗ್ ಆಪರೇಶನ್ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯ್ ಸ್ವಾಮಿ ಮತ್ತು ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮೂರು ವರ್ಷಗಳಲ್ಲಿ ಯಾರ್ಯಾರು ಎನೇನು ಮಾಡಿದ್ದಾರೆ ಗೊತ್ತು. ಕುತಂತ್ರದ ಮುಂದಿನ ಭಾಗವಾಗಿ ಈ ಸ್ಟಿಂಗ್ ಆಪರೇಶನ್ ಮಾಡಲಾಗಿದೆ. ಭ್ರಷ್ಟಾಚಾರಕ್ಕಿಂತ ಹೆಚ್ಚಾಗಿ ನಮ್ಮ ಪಕ್ಷವನ್ನು ಮುಗಿಸಲು ಸಂಚು ರೂಪಿಸಿ ಈ ಸ್ಟಿಂಗ್ ಆಪರೇಶನ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಶಾಸಕ ಮಲ್ಲಿಕಾರ್ಜುನ ಖೂಬಾ ಹುಡುಗಾಟಿಗೆಗಾಗಿ ಈ ರೀತಿ ಬೇಡಿಕೆ ಇಟ್ಟಿದ್ದಾರೆ. ಅವರು ತುಂಬಾ ಒಳ್ಳೆಯವರು. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ.ಟಿ.ದೇವೇಗೌಡ ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಜೂನ್ 12 ರಂದು ಜೆಡಿಎಸ್ ಶಾಸಕಾಂಗ ಸಭೆ ಕರೆಯಾಗಿದೆ. ಈ ಸಭೆಯಲ್ಲಿ ಪಕ್ಷಕ್ಕೆ ನಿಷ್ಠೆಯಿಂದಿರುವವರು ಮಾತ್ರ ಹಾಜರಾಗಲಿ. ಪಕ್ಷದಿಂದ ಬೆಳೆದು ಪಕ್ಷಕ್ಕೆ ದ್ರೋಹ ಮಾಡುವ ಶಾಸಕರು ದಯವಿಟ್ಟು ಆಗಮಿಸುವುದು ಬೇಡ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಂಡಾಯ ಶಾಸಕರಿಗೆ ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.