ರಾಜ್ಯಾದ್ಯಂತ ಫೆಬ್ರವರಿ 27 ಮತ್ತು ಮಾರ್ಚ್ 2 ರಂದು ರಾಷ್ಟ್ರೀಯ ಪಲ್ಸ್ ಪೊಲೀಯೋ ಲಸಿಕಾ ಅಭಿಯಾನದಡಿ 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಿದೆ.
ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ಪಂಚಾಯಿತಿ ಮಟ್ಟದಲ್ಲೂ ಎರಡು ಹಂತದಲ್ಲಿ ಪಲ್ಸ್ ಪೊಲೀಯೋ ಲಸಿಕೆಯನ್ನು ವಿತರಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಫೆಬ್ರವರಿ 27 ರಂದು ಮತ್ತು ಮಾರ್ಚ್ 2 ರಂದು ಬಸ್ ನಿಲ್ದಾಣ, ರೈಲು ಮತ್ತು ವಿಮಾನ ನಿಲ್ದಾಣಗಳೂ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕಲಿದ್ದಾರೆ.
ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿ, ಐದು ವರ್ಷದೊಳಗಿನ ಮಕ್ಕಳಿಗೆ ಇದೇ 27 ರಂದು ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ ಪ್ರಮುಖ ಬೀದಿಗಳಲ್ಲಿಯೂ ಲಸಿಕೆ ಹಾಕಲಾಗುವುದು. ನಂತರ ಮನೆ-ಮನೆಗೆ ಆರೋಗ್ಯ ಕಾರ್ಯಕರ್ತೆಯರು ತೆರಳಿ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದರು ಎಂದು ಜಿಲ್ಲೆಗಳಿಂದ ವರದಿಯಾಗಿವೆ.