ಕೋಲಾರ : ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜನರ ಹಣ ಕದ್ದಿದೆ. ಏನೇ ಕೆಲಸ ಮಾಡಿದರೂ ಲಂಚ ಹೊಡೆದಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದರು.
ಕೋಲಾರದಲ್ಲಿ ನಡೆದ ಜೈ ಭಾರತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ 40% ಕಮಿಷನ್ ಬಿಟ್ಟು ಏನೂ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರ ಜನರ ಹಣ ಕದ್ದಿದೆ. ಏನೇ ಕೆಲಸ ಮಾಡಿದರೂ ಅದರಲ್ಲಿ 40% ಲಂಚ ಹೊಡೆದಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ. ಕಂಟ್ರಾಕ್ಟರ್ಗಳು ಮೋದಿಗೆ ಪತ್ರ ಬರೆದು ತಿಳಿಸಿದ್ದಾರೆ. ಮೋದಿ ಆ ಪತ್ರಕ್ಕೆ ಏನೂ ಉತ್ತರ ಕೊಟ್ಟಿಲ್ಲ. ಪತ್ರಕ್ಕೆ ಉತ್ತರ ಕೊಟ್ಟಿಲ್ಲ ಎಂದರೆ ಅದರಲ್ಲಿ ಮೋದಿ ಪಾಲು ಇದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಟೀಚರ್, ಪೊಲೀಸ್ ಹಾಗೂ ಎಂಜಿನಿಯರ್ ನೇಮಕಾತಿಯಲ್ಲಿ ಹಗರಣ ನಡೆದಿದೆ. ನಾನು ಸಂಸತ್ನಲ್ಲಿ ಈ ವಿಚಾರ ಹಾಗೂ ಅದಾನಿ ವಿಚಾರವಾಗಿ ಕೇಳಿದೆ. ಕೂಡಲೇ ನನ್ನ ಮೈಕ್ ಆಫ್ ಮಾಡಿದರು. ನಿಮಗೂ ಅದಾನಿಗೂ ಏನು ಸಂಬಂಧ ಎಂದು ಕೇಳಿ ನಾನು ಒಂದು ಫೋಟೋ ತೋರಿಸಿದೆ.
ಏನು ಸಂಬಂಧ ಎಂದು ಕೇಳಿದೆ. ದೇಶದ ವಿಮಾನ ನಿಲ್ದಾಣವನ್ನು ಕಾನೂನು ಮೀರಿ ಅದಾನಿಗೆ ಕೊಟ್ಟಿದ್ದಾರೆ. ಅದು ಯಾಕೆ ಕೊಟ್ಟರು ಎಂದು ಕೇಳಿದೆ. ಅದಾನಿಗೆ ವಿಮಾನ ನಿಲ್ದಾಣ ವಿಚಾರದಲ್ಲಿ ಯಾವ ಅನುಭವವೂ ಇಲ್ಲ. ಅವರು ನಿಯಮ ಮೀರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.