ಬೆಂಗಳೂರು: ರೈತರ ಹೆಸರು ಹೇಳಿಕೊಂಡು ಮತ್ತೆ ರಾಜ್ಯ ಸರ್ಕಾರ ನಂದಿನಿ ಹಾಲಿನ ದರ ಏರಿಕೆ ಮಾಡಲು ಮುಂದಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಮಾಗಡಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ಮಾಡಿ ಮಾತನಾಡಿದ ಅವರು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ ಮಾಡಲಿದ್ದೇವೆ. ಈ ದರ ರೈತರಿಗೆ ಹೋಗಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಒಮ್ಮೆ ನಂದಿನಿ ಹಾಲಿನ ದರ ಏರಿಕೆ ಮಾಡಲಾಗಿತ್ತು.
ಲೋಕಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯ ಸರ್ಕಾರ ನಂದಿನಿ ಹಾಲಿನ ದರ ಏರಿಕೆ ಮಾಡಿತ್ತು. ಆದರೆ 50 ಎಂಎಲ್ ಹೆಚ್ಚು ಹಾಲು ನೀಡುತ್ತಿರುವುದಾಗಿ ಸಮಜಾಯಿಷಿ ನೀಡಿತ್ತು. ಆದರೆ ಇದರ ಬಗ್ಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಗ್ಯಾರಂಟಿಗಳಿಗೆ ಹಣ ಹೊಂದಿಸಲು ದರ ಏರಿಕೆ ಮಾಡಲಾಗಿದೆ ಎಂದು ಕಿಡಿ ಕಾರಿದ್ದರು.
ಆದರೆ ಈಗ ಮತ್ತೆ ಹಾಲಿನ ದರ ಏರಿಕೆ ಬರೆ ಗ್ರಾಹಕರಿಗೆ ತಟ್ಟಲಿದೆ. ನಾವು ಹಾಲಿನ ದರ ಏರಿಕೆ ಮಾಡುತ್ತಿರುವುದು ರೈತರಿಗೆ ನೀಡಲು. ಆದರೆ ವಿಪಕ್ಷ ಜೆಡಿಎಸ್ ಹಾಲಿನ ದರ ಏರಿಕೆ ಮಾಡಿದ ತಕ್ಷಣ ಬಾಯಿಬಡಿದುಕೊಳ್ಳುತ್ತದೆ. ನೀವೆಲ್ಲಾ ರೈತರ ಮಕ್ಕಳಾ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.