ಸಿಎಂ ಸಿದ್ದರಾಮಯ್ಯನನ್ನು ಸೋಲಿಸುವುದೇ ನನ್ನ ಗುರಿ ಎಂದು ಶ್ರೀನಿವಾಸ್ ಪ್ರಸಾದ್ ಅವರು ಹೇಳಿಕೆ ನೀಡಿದ್ದಾರೆ. ಆದರೆ, ನನ್ನನ್ನು ಸೋಲಿಸಲು ನೂರು ಶ್ರೀನಿವಾಸ್ ಪ್ರಸಾದ್‌ರು ಹುಟ್ಟಿಬಂದರು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲ್ ಎಸೆದಿದ್ದಾರೆ.
123 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಸೇರಿದಂತೆ ಯಾರು ಅನಿವಾರ್ಯವಲ್ಲ ಎನ್ನುವ ಮೂಲಕ ಮಾಜಿ ಮಂತ್ರಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಟಾಂಗ್ ನೀಡಿದ್ದಾರೆ.
ಮೈಸೂರು ಜಿಲ್ಲೆಯ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಅವರ ಮೇಲೆ ವೈಯಕ್ತಿಯ ದ್ವೇಷ, ಅಸೂಯೆ ಇದ್ದಿದ್ದರೇ ಅವರನ್ನು ಮಂತ್ರಿ ಮಾಡಿ ಕಂದಾಯ ಇಲಾಖೆ ಕೊಡುತ್ತಿರಲಿಲ್ಲ. ಮಂತ್ರಿ ಪರಿಷತ್‌ನಲ್ಲಿ ಚರ್ಚೆ ನಡೆಸಿಯೇ ಪ್ರಸಾದ್ ಸೇರಿದಂತೆ 14 ಸಚಿವರನ್ನು ಕೈಬಿಟ್ಟಿದ್ದೇನೆ. ಅವರೆಲ್ಲ ಸುಮ್ಮನಿಲ್ಲವೆ. ಅಧಿಕಾರವಿದ್ದರೆ ಪಕ್ಷಬೇಕು, ಅಧಿಕಾರವಿಲ್ಲದಿದ್ದರೆ ಪಕ್ಷ ಬೇಡವೇ, ಅವರ ರಾಜೀನಾಮೆ ದುರಾದೃಷ್ಟಕರ ಎಂದು ಕಿಡಿಕಾರಿದರು.
123 ಕಾಂಗ್ರೆಸ್ ಶಾಸಕರಿದ್ದು ಎಲ್ಲರನ್ನು ಮಂತ್ರಿಮಾಡಲು ಸಾಧ್ಯವಿಲ್ಲ. ನಾನು ಹಾಗೂ ಗೃಹ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿ ಪ್ರಸಾದ್ ಅವರ ಹಿರಿತನ ನೋಡಿ ಮಂತ್ರಿ ಸ್ಥಾನ ನೀಡಿದೆವು. ಆದರೆ, ಅದೆಲ್ಲವನ್ನು ಮರೆತು ನಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದ್ಯಾವುದನ್ನು ನಾನು ಲೆಕ್ಕಕ್ಕೆ ಇಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ