Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಗಡಗಡ, ದಲಿತ ಮತಗಳು ಸ್ಥಾನ ಪಲ್ಲಟ? ಇದು ಶ್ರೀನಿವಾಸನ ಪ್ರಸಾದ!

ಸಿದ್ದರಾಮಯ್ಯ ಗಡಗಡ, ದಲಿತ ಮತಗಳು ಸ್ಥಾನ ಪಲ್ಲಟ? ಇದು ಶ್ರೀನಿವಾಸನ ಪ್ರಸಾದ!
ಬೆಂಗಳೂರು , ಸೋಮವಾರ, 24 ಅಕ್ಟೋಬರ್ 2016 (09:40 IST)

ಬೆಂಗಳೂರು: ಮೂರು ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಸಚಿವರಾಗಿ, ಕೆಲವು ರಾಜಕಾರಣದ ಒಳ ಬೇಗುದಿಯಿಂದ ಕಾಂಗ್ರೆಸ್ನ ಸದಸ್ಯತ್ವಕ್ಕೇ ಹಾಗೂ  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಸಿದ್ದರಾಮಯ್ಯರ ವಿರುದ್ಧ ಸಮರ ಸಾರಿದ್ದಾರೆ.
 


 

ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಆರೋಪದ ಸುರಿಮಳೆಯನ್ನೇ ಗೈಯ್ಯುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡುವ ಮೂಲಕ, ನನ್ನನ್ನು ಸಚಿವ ಸಂಪುಟ ವಿಸ್ತರಣೆ ವೇಳೆ ಕೆಟ್ಟದಾಗಿ ನೋಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ, ರಾಜ್ಯ ಸರಕಾರದ ವಿರುದ್ಧ ಹರಿಹಾಯುತ್ತಿದ್ದರೆ. ಮುಂದುವರಿದು ಕಾಂಗ್ರೆಸ್ ಸರಕಾರದಲ್ಲಿ ಏನೆಲ್ಲ ಅವ್ಯವಹಾರಗಳಾಗಿವೆ ಎನ್ನುವುದನ್ನು ಮುಂಬರುವ ದಿನಗಳಲ್ಲಿ ಜನತೆಯ ಮುಂದಿಡುತ್ತೇನೆ ಎಂದು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಅಲ್ಲದೆ, ಚಿಕ್ಕ ಮಕ್ಕಳಿಗೆ ತಾವು ಕಟ್ಟಿಕೊಂಡಿರುವ ವಾಚ್ ಬೆಲೆ ತಿಳಿದಿರುತ್ತದೆ. ಅದರಲ್ಲಿ ನಾಡಿನ ದೊರೆಯಾದವನಿಗೆ ಅದರ ಬೆಲೆ ತಿಳಿಯದೇ ಎಂದು 'ವಾಚ್ ಪುರಾಣ'ದ ಹಾಳೆಯನ್ನು ಮತ್ತೊಮ್ಮೆ ತಿರುವಿ ಹಾಕಿದ್ದಾರೆ.

ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ ಅವರ ಆರೋಪದಲ್ಲಿ ಹುರುಳಿದಿಯೋ, ಇಲ್ಲವೋ ಎನ್ನುವುದು ಎರಡನೇ ಮಾತು. ಆದರೆ, ಐದು ವರ್ಷದ ಆಡಳಿತಕ್ಕೆ ಇನ್ನೊಂದು ವರ್ಷ ಬಾಕಿಯಿರುವ ಪ್ರಸ್ತುತ ಸಂದರ್ಭದಲ್ಲಿ ಸಿದ್ದರಾಮಯ್ಯರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಚಿವ ಸ್ಥಾನ ಬೇಕೆಂದರೆ ಸೂಟ್ಗೇಸ್ ನೀಡಬೇಕು ಎಂದು ಬಾಂಬ್ ಸಿಡಿಸುವ ಮೂಲಕ ಶ್ರೀನಿವಾಸ, ಸಚಿವ ಸಂಪುಟ ವಿಸ್ತರಣೆ ವಿಸ್ತರಣೆ ವೇಳೆ ಏನೇನು ನಡೆಯುತ್ತದೆ, ಯಾರ್ಯಾರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನುವ ಕುರಿತು ಸೂಕ್ಷ್ಮ ಮಾಹಿತಿಯನ್ನು ಸಾರ್ವತ್ರಿಕರಣಗೊಳಿಸಿದ್ದಾರೆ. ಅಲ್ಲದೆ, ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಅವರ ಬುಡಕ್ಕೇ ಕೈ ಹಾಕಿದ್ದಾರೆ.

 

ಪ್ರಸ್ತುತ ಸಂದರ್ಭದಲ್ಲಿ ಈ ಹಿಂದಿನ ಕೆಲ ಘಟನೆಗಳನ್ನು ರಾಜಕೀಯ ವಿಶ್ಲೇಷಣೆಗೆ ಒಳಪಡಿಸಿದಾಗ ಕೆಲವು ವಿಷಯ ಗಮನಕ್ಕೆ ಬರುತ್ತವೆ. ಕಾಂಗ್ರೆಸ್ ಪಕ್ಷದ ಒಳಗಿನಿಂದಲೇ ಸಿದ್ದರಾಮಯ್ಯ ದಲಿತ ವಿರೋಧಿ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿತ್ತು. ಅದನ್ನು ಕಳಚಿಕೊಳ್ಳಲು ಸಿದ್ದರಾಮಯ್ಯ 50 ಲಕ್ಷ ರು. ಕಾಮಗಾರಿಗಳ ಗುತ್ತಿಗೆಯಲ್ಲಿ ಪರಿಶಿಷ್ಟರಿಗೆ ಮೀಸಲು ನೀಡುವ ವ್ಯವಸ್ಥೆ ಜಾರಿಗೆ ತಂದು, ಅವರ ಮೂಗಿಗೆ ತುಪ್ಪ ಸವರಲು ಯತ್ನಿಸಿದರು. ಅಷ್ಟಾದರೂ ದಲಿತ ಸಿಎಂ ಕೂಗು ಎಲ್ಲೆಡೆ ಅನುರಣಿಸುತ್ತಲೇ ಇತ್ತು. ಹೀಗಿದ್ದಾಗ ಅದನ್ನು ಶಮನಗೊಳಿಸಲೇಬೇಕೆಂದು ಕಟಿಬದ್ಧರಾದ ಸಿಎಂ ಖರ್ಗೆ ಪುತ್ರ ಪ್ರಿಯಾಂಕ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದರು.

 

ಅದರ ಮುಂದುವರಿದ ಅಧ್ಯಾಯವೇ ಶ್ರೀನಿವಾಸ ಪ್ರಸಾದ್ ಅವರಿಗೆ ಸಂಪುಟದಿಂದ ಗೆಟ್ ಪಾಸ್ ಕೊಟ್ಟಿದ್ದು. ರಾಜ್ಯ ರಾಜಕೀಯಕ್ಕೆ ಈ ನಿರ್ಧಾರ ಅಷ್ಟೇನೂ ಪೆಟ್ಟು ನೀಡದು ಎಂದು ಖರ್ಗೆ ಮತ್ತು ಸಿದ್ದರಾಮಯ್ಯ ಅಂದುಕೊಂಡಿದ್ದರು. ಆದರೆ ಆ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿ ಇಬ್ಬರೂ ಆರೋಪದ ಮೂಟೆಯನ್ನು ತಲೆ ಮೇಲೆ ಹೊತ್ತುಕೊಳ್ಳುವಂತಾಗಿದೆ.

 

ಅಸಮಾಧಾನದ ಕಿಡಿ ಕಾರುತ್ತಿರುವ ಶ್ರೀನಿವಾಸ ಪ್ರಸಾದ ಹೋದಲ್ಲಿ-ಬಂದಲ್ಲಿ ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಹೇಳಿಕೆ ನೀಡುತ್ತ, ಅವರನ್ನು ಕಂಗಾಲೆಬ್ಬಿಸುತ್ತಿದ್ದಾರೆ. ಇಂತಹ ಹೇಳಿಕೆಯಿಂದ ದಲಿತರು ಸಿದ್ದರಾಮಯ್ಯರಿಂದ ದೂರ ಸರಿಯುತ್ತಾರೆ ಎನ್ನುವುದಕ್ಕಿಂತ ಕಾಂಗ್ರೆಸ್ಸಿನಿಂದಲೇ ವಿಮುಖರಾಗುತ್ತಾರೆ ಎನ್ನುವ ಬಲವಾದ ಅಲೆ ಸೃಷ್ಟಿಸಿದೆ. ಯಾಕೆಂದರೆ ಶ್ರೀನಿವಾಸ ಪ್ರಸಾದ್, ಸಿದ್ದರಾಮಯ್ಯ ತಿಳಿದಷ್ಟು ಸುಲಭದ ವ್ಯಕ್ತಿಯಲ್ಲ. ಹಳೇ ಮೈಸೂರು ಭಾಗದಲ್ಲಿ ಒಂದಷ್ಟು ದಲಿತ ಮತಗಳ ಸ್ಥಾನ ಪಲ್ಲಟ ಮಾಡುವ ಶಕ್ತಿ-ಸಾಮರ್ಥ್ಯ ಅವರಲ್ಲಿದೆ. ಈ ಕಾರಣಕ್ಕಾಗಿಯೇ ಆಡಳಿತದ ಬುಡಕ್ಕೆ ಹಾಗೂ ಸ್ಥಾನಮಾನಕ್ಕೇ ಡ್ಯಾಮೇಜ್ ಆಗುವಂತ ಹೇಳಿಕೆ ಶ್ರೀನಿವಾಸ ಪ್ರಸಾದ ನೀಡುತ್ತಿದ್ದರೂ, ಸಿದ್ದರಾಮಯ್ಯ ಅದಕ್ಕೆ ಪ್ರತಿಯಾಗಿ ಯಾವೊಂದು ಹೇಳಿಕೆಯನ್ನು ಗಟ್ಟಿಯಾಗಿ ನೀಡದೆ, ಮೃದುವಾಗಿಯೇ ಟೀಕಿಸುತ್ತ ದಿನದೂಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಬರ್ಮುಡಾ ಟ್ರಯಾಂಗಲ್: ಚಿದಂಬರ ರಹಸ್ಯ ಬಯಲು?