ಫೇಸ್ಬುಕ್ ಮೂಲಕ ಸುಪಾರಿ ಕೊಟ್ಟು ಮಗನೇ ತಂದೆಯನ್ನು ಹತ್ಯೆ ಮಾಡಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪಿಚ್ಚೋರ್ ನಗರದಲ್ಲಿರುವ ಮನೆಯಲ್ಲಿ ರಾತ್ರಿ ಮಲಗಿದ್ದಾಗ 59 ವರ್ಷದ ಮಹೇಶ್ ಗುಪ್ತಾ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಕೊಲೆಯಾದ ಮಹೇಶ್ ಗುಪ್ತಾ ಮಗ ಅಂಕಿತ್, ಆತನ ಸ್ನೇಹಿತ ನಿತಿನ್ ಲೋಧಿ ಹಾಗೂ ಬಿಹಾರ ಮೂಲದ ಹಂತಕ ಅಜಿತ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಮಗ ಅಂಕಿತ್ ಮನೆಯ ನೆಲಮಾಳಿಗೆಯಲ್ಲಿ ಮಲಗಿದ್ದ.
ಮಗ ಮನೆಯಲ್ಲಿದ್ದಾಗ್ಲೇ ಮೂರನೇ ಮಹಡಿಯಲ್ಲಿದ್ದ ಮಹೇಶ್ ಗುಪ್ತಾನನ್ನು ಕೊಲೆ ಮಾಡಲಾಗಿದೆ. ಅಂಕಿತ್‌ಗೆ ಕುಡಿತ ಹಾಗೂ ಜೂಜಾಡುವ ಚಟವಿತ್ತು. ಆದ್ರೆ ತಂದೆ ಅದಕ್ಕೆಲ್ಲ ಹಣ ಕೊಡ್ತಾ ಇರಲಿಲ್ಲ. ಇದೇ ಕಾರಣಕ್ಕೆ ಆತ ತಂದೆಯ ಮೇಲೆ ಕೋಪ ಮಾಡಿಕೊಂಡಿದ್ದ.
ಕ್ರಿಮಿನಲ್ ಚಟುವಟಿಕೆಗಳಲ್ಲೂ ಅಂಕಿತ್ ಭಾಗಿಯಾಗಿದ್ದ. ತಂದೆಯನ್ನು ಅಪಹರಿಸಿ ಹತ್ಯೆ ಮಾಡಲು ಸ್ಕೆಚ್ ಹಾಕಿದ ಅಂಕಿತ್, ಫೇಸ್ಬುಕ್ ಮೂಲಕ ಬಿಹಾರ ಕಿಂಗ್ ಎಂಬ ಗ್ರೂಪ್ ಒಂದನ್ನು ಸಂಪರ್ಕಿಸಿದ್ದಾನೆ. ಸುಪಾರಿ ಪಡೆದು ಅಪಹರಣ, ಕೊಲೆ ಮಾಡುವುದೇ ಈ ಗ್ಯಾಂಗ್‌ನ ಕೆಲಸ.
1 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದ ಅಂಕಿತ್ ಅಪ್ಪನ ಹತ್ಯೆಗೆ ಸುಪಾರಿ ಕೊಟ್ಟಿದ್ದ. ಅದರಂತೆ ಜುಲೈ 12ರಂದು ಗ್ರೂಪ್ ಅಡ್ಮಿನ್ ಅಜಿತ್ ಸಿಂಗ್ ಖಾತೆಗೆ 10,000 ರೂಪಾಯಿ ಟ್ರಾನ್ಸ್‌ಫರ್ ಮಾಡಿದ್ದ. ಅಂಕಿತ್ ಮತ್ತವನ ಸ್ನೇಹಿತ ಲೋಧಿ, ಹಂತಕನಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದ್ರೆ ಉಳಿದ ಹಣ ಹೊಂದಿಸಲಾಗದೇ ಇದ್ದಿದ್ರಿಂದ ಪ್ಲಾನ್ ಕ್ಯಾನ್ಸಲ್ ಮಾಡಿರೋದಾಗಿ ತಿಳಿಸಿದ್ರು. ಆದ್ರೆ ಸುಪಾರಿ ಕಿಲ್ಲರ್ ಅಜಿತ್ ಸಿಂಗ್ ಎಲ್ಲಾ ವಿವರ ಕೊಡುವಂತೆ ಕೇಳಿದ.
ತಂದೆಯ ಹತ್ಯೆಗೆ ಸ್ಕೆಚ್ ಹಾಕಿರೋದಾಗಿ ಬಾಯ್ಬಿಟ್ಟಿದ್ದ ಅಂಕಿತ್, ಘಟನೆ ನಡೆದ ರಾತ್ರಿ ತನ್ನ ಪತ್ನಿ ಮತ್ತು ಮಗಳನ್ನು ಬೇರೆ ಕೋಣೆಯಲ್ಲಿ ಮಲಗಿಸಿದ್ದ. ಹಂತಕ ಅಜಿತ್ ಸಿಂಗ್‌ಗೆ ಮನೆಯೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದ. ಗುಂಡು ಹಾರಿದ ಸದ್ದಿಗೆ ಅಂಕಿತ್ ಪತ್ನಿ ಎಚ್ಚರಗೊಂಡಿದ್ದಳು.
ಆದ್ರೆ ಅದು ಸಿಡಿಲಿನ ಶಬ್ಧವೆಂದು ಸುಳ್ಳು ಹೇಳಿದ್ದ ಅಂಕಿತ್, ಹಂತಕನ್ನು ಕಳುಹಿಸಿ ಚಿಲಕ ಹಾಕಿಕೊಂಡು ಏನೂ ಗೊತ್ತಿಲ್ಲದಂತೆ ಮಲಗಿಬಿಟ್ಟಿದ್ದ. ಕೊಲೆಯಾದ ಮಹೇಶ್ ಗುಪ್ತಾ ಪತ್ನಿ 20 ವರ್ಷಗಳ ಹಿಂದೆಯೇ ತೀರಿಕೊಂಡಿದ್ಲು. ಆತನ ಇನ್ನೊಬ್ಬ ಮಗ ಸೇನೆಯಲ್ಲಿದ್ದ, ಇತ್ತೀಚೆಗಷ್ಟೆ ಆತ್ಮಹತ್ಯೆಗೆ ಶರಣಾಗಿದ್ದ. ಅದರಿಂದ 1 ಕೋಟಿ ರೂಪಾಯಿ ಪರಿಹಾರ ಮಹೇಶ್ ಗುಪ್ತಾಗೆ ಸಿಕ್ಕಿತ್ತು. ಅದಲ್ಲದೆ ಪೆನ್ಷನ್ ಕೂಡ ಬರುತ್ತಿತ್ತು. ಆ ಹಣದ ಮೇಲೆ ಕಣ್ಣು ಹಾಕಿದ್ದ ಮಗ ತಂದೆಯನ್ನೇ ಕೊಲ್ಲಿಸಿ ಕಂಬಿ ಎಣಿಸ್ತಿದ್ದಾನೆ.