ಮುಸ್ಲಿಮರ ಪವಿತ್ರ ಹಜ್ ಯಾತ್ರೆಗೆ ಇನ್ನುಮುಂದೆ ಮಹಿಳೆಯರು ಪುರುಷರ ಜೊತೆಯಲ್ಲೇ ಹೋಗಬೇಕೆಂಬ ನಿಯಮವಿಲ್ಲ. ಮಹಿಳೆಯರು ಏಕಾಂಗಿಯಾಗಿ ಅಥವಾ ಮಹಿಳೆಯರ ಜೊತೆಯಲ್ಲೇ ಹಜ್ ಯಾತ್ರೆಗೆ ಹೋಗಲು ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾದ ಪ್ರಧಾನಿಯಾಗಿರುವ ಮಹಾರಾಜ ಮೊಹಮ್ಮದ್ ಬಿನ್ ಸಲ್ಮಾನ್ ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ಹಜ್ ಇಸ್ಲಾಂ ಧರ್ಮದ 5 ಸ್ತಂಭಗಳಲ್ಲಿ ಒಂದಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಗೆ ತೆರಳಬೇಕೆಂದು ಮುಸ್ಲಿಮರು ಬಯಸುತ್ತಾರೆ. ಇದುವರೆಗೂ ಹಜ್ ಯಾತ್ರೆಗೆ ತೆರಳುವ ಮಹಿಳೆಯರ ಜೊತೆ ಪುರುಷರು ಇರಲೇಬೇಕಿತ್ತು. ಪುರುಷರ ರಕ್ಷಣೆ ಇಲ್ಲದೆ ಮಹಿಳೆಯರು ಹಜ್ ಯಾತ್ರೆಗೆ ಹೋಗುವಂತಿರಲಿಲ್ಲ. ಆದರೆ, ಇದೀಗ ಸೌದಿ ಅರೇಬಿಯಾ ಆ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿ, ಮಹಿಳೆಯರು ಸ್ವತಂತ್ರರಾಗಿ ಹಜ್ ಯಾತ್ರೆಗೆ ತೆರಳಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಮೆಕ್ಕಾಗೆ ಮುಸ್ಲಿಂ ಮಹಿಳೆಯರು ಇನ್ನುಮುಂದೆ ಯಾವುದೇ ಪುರುಷರ ರಕ್ಷಣೆ ಇಲ್ಲದೆ ತೆರಳಬಹುದು. ಹಾಗೇ, ಈ ಹಜ್ ಯಾತ್ರೆಗೆ ಬರುವ ಮಹಿಳೆಯರಿಗೆ ಯಾವುದೇ ತೊಂದರೆ ಆಗಬಾರದೆಂದು ಮಹಿಳೆಯರಿಗೆ ಸುರಕ್ಷತೆಯನ್ನೂ ಹೆಚ್ಚಿಸಲಾಗಿದೆ. ಈ ಬಗ್ಗೆ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಬಿನ್ ಫೌಜಾನ್ ಅಲ್-ರಬಿಯಾ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.