Publish Date: Sat, 09 Jun 2018 (08:46 IST)
Updated Date: Sat, 09 Jun 2018 (08:47 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ವಂಚಿತರ ಅಸಮಾಧಾನ ಜೋರಾಗಿದ್ದು, ಇದಕ್ಕೆ ಸಿದ್ದರಾಮಯ್ಯನವರ ಕುಮ್ಮಕ್ಕು ಕಾರಣ ಎಂಬ ಆರೋಪ ಕೇಳಿಬಂದಿದೆ.
ಬಂಡಾಯವೆದ್ದಿರುವ ಶಾಸಕರ ಪೈಕಿ ಬಹುತೇಕರು ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರೇ ಆಗಿರುವುದರಿಂದ ಅವರ ಕುಮ್ಮಕ್ಕಿನಿಂದಲೇ ಈ ಅಸಮಾಧಾನ ಹೊಗೆ ಎದ್ದಿದೆ ಎಂಬ ಆರೋಪಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ.
ಹೀಗಾಗಿ ಇದೀಗ ಕಾಂಗ್ರೆಸ್ ಹೈಕಮಾಂಡ್ ನೀವೇ ಇದನ್ನು ಬಗೆಹರಿಸಿ ಎಂದು ಸಿದ್ದರಾಮಯ್ಯಗೆ ತಾಕೀತು ಮಾಡಿದೆ ಎನ್ನಲಾಗಿದೆ. ಹೀಗಾಗಿ ಬಾದಾಮಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ಮರಳಿದರು ಎನ್ನಲಾಗಿದೆ.
ಆದರೆ ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಿದ್ದರಾಮಯ್ಯ, ಇಂತಹ ಆರೋಪದಲ್ಲಿ ಹುರುಳಿಲ್ಲ. ನಾನು ಯಾರಿಗೂ ಕುಮ್ಮಕ್ಕು ನೀಡಿಲ್ಲ. ಈಗ ಸಚಿವರಾಗಿರುವವರೂ ನನ್ನ ಆಪ್ತರೇ. ಎಲ್ಲರೂ ನನಗೆ ಆಪ್ತರೇ ಎಂದಿದ್ದಾರೆ. ಅಂತೂ ಕಾಂಗ್ರೆಸ್ ನಲ್ಲಿ ಎಂಬಿ ಪಾಟೀಲ್ ನೇತೃತ್ವದಲ್ಲಿ ಖಾತೆ ಕ್ಯಾತೆ ಜೋರಾಗಿರುವುದಂತೂ ಸುಳ್ಳಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.