Publish Date: Wed, 15 Apr 2026 (15:48 IST)
Updated Date: Wed, 15 Apr 2026 (15:52 IST)
ಮೈಸೂರು: ಸಿದ್ದರಾಮಯ್ಯನವರೇ ಮುಂದಿನ ಐದು ವರ್ಷ ಸಿಎಂ ಆಗಲಿದ್ದಾರೆ ಎಂದು ಪುತ್ರ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ಖುದ್ದು ಮುಖ್ಯಮಂತ್ರಿಯವರೇ ವಿಧಾನಮಂಡಲ ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರೇ ಹೇಳಿರುವುದರಿಂದ ಬೇರೆ ಚರ್ಚೆಯೇ ಇಲ್ಲ ಎಂದರು.
ಸಚಿವ ಸಂಪುಟ ಪುನರ್‌ರಚನೆ ಮಾಡುವಂತೆ ಕೇಳಲೆಂದು ಶಾಸಕರು ನವದೆಹಲಿಗೆ ಹೋಗಿದ್ದಾರೆ. ಇನ್ನೂ ಶಾಸಕರು ಅಲ್ಲಿಗೆ ಹೋಗಿರುವುದಕ್ಕೂ ಹಾಗೂ ಉಪಚುನಾವಣೆ ಫಲಿತಾಂಶಕ್ಕೂ ಸಿಎಂ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಸರ್ಕಾರ ಭದ್ರವಾಗಿದೆ. ಸಿಎಂ ಸ್ಥಾನವೂ ಭದ್ರವಾಗಿದೆ. ನಾನು ಎಷ್ಟು ಸಲ ಇದನ್ನು ಹೇಳಲಿ ಎಂದರು.
ಸರ್ಕಾರಕ್ಕೆ ಮೂರು ವರ್ಷ ಸಮೀಪಿಸುತ್ತಿದ್ದ ಹಾಗೇ ಸಂಪುಟ ಪುನರ್‌ರಚನೆಗೆ ಕೇಳಿತ್ತಿದ್ದಾರೆ. ಇದನ್ನು ಮಾಡಬೇಕಾಗಿದ್ದು, ಯಾವಾಗ ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆ ಸಿಎಂ ಆಗಿರುವವರೆಗೂ ನಾನು ಆ ಸ್ಥಾನ ಕೇಳುವುದಿಲ್ಲ ಎಂದು ಹೇಳಿದರು.
ತಂದೆ ನನ್ನನ್ನು ವಸೂಲಿಗಾಗಿ ನೇಮಿಸಿಕೊಂಡಿಲ್ಲ. ನಾನು ಯಾವತ್ತೂ ವಸೂಲಿ ಮಾಡಿಲ್ಲ. ತಂದೆಯ ಪರವಾಗಿ ವರುಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.